ಆಪ್ ಸಂಸದ ರಾಘವ ಛಡ್ಡಾ ಸರಕಾರಿ ಬಂಗಲೆ ಖಾಲಿ ಮಾಡಬೇಕಿಲ್ಲ : ದಿಲ್ಲಿ ಹೈಕೋರ್ಟ್
Photo- PTI
ಹೊಸದಿಲ್ಲಿ: ಪಟಿಯಾಲಾ ಹೌಸ್ ನ್ಯಾಯಾಲಯದ ಆದೇಶವನ್ನು ಮಂಗಳವಾರ ತಳ್ಳಿ ಹಾಕಿರುವ ದಿಲ್ಲಿ ನ್ಯಾಯಾಲಯವು ಆಪ್ ಸಂಸದ ರಾಘವ ಛಡ್ಡಾ ತನ್ನ ಸರಕಾರಿ ಬಂಗಲೆಯಲ್ಲಿ ವಾಸ್ತವ್ಯವನ್ನು ಮುಂದುವರಿಸಬಹುದು ಎಂದು ಹೇಳಿದೆ.
ತನ್ನ ಮಧ್ಯಂತರ ಆದೇಶವನ್ನು ಹಿಂದೆಗೆದುಕೊಂಡು ಛಡ್ಡಾ ಅವರಿಗೆ ಹಂಚಿಕೆ ಮಾಡಲಾದ ಸರಕಾರಿ ಬಂಗಲೆಯನ್ನು ತೆರವುಗೊಳಿಸಲು ರಾಜ್ಯಸಭಾ ಸಚಿವಾಲಯಕ್ಕೆ ಅವಕಾಶವನ್ನು ಕಲ್ಪಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಛಡ್ಡಾ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಛಡ್ಡಾ ಅವರನ್ನು ಸರಕಾರಿ ಬಂಗಲೆಯಿಂದ ತೆರವುಗೊಳಿಸದಂತೆ ರಾಜ್ಯಸಭಾ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದ ಎ.18ರ ವಿಚಾರಣಾ ನ್ಯಾಯಾಲಯದ ಆದೇಶವು ನವೀಕರಣಗೊಂಡಿದೆ ಎಂದು ನ್ಯಾ.ಎ.ಜೆ.ಭಂಭಾನಿ ಹೇಳಿದರು. ಸರಕಾರಿ ಬಂಗಲೆಯ ಹಂಚಿಕೆಯು ಒಮ್ಮೆ ರದ್ದಾದ ಬಳಿಕ ಅದರಲ್ಲಿ ತನ್ನ ಸಂಪೂರ್ಣ ಅಧಿಕಾರಾವಧಿಗೆ ವಾಸವನ್ನು ಮುಂದುವರಿಸಲು ಛಡ್ಡಾಗೆ ಹಕ್ಕಿಲ್ಲ ಎಂದು ವಿಚಾರಣಾ ನ್ಯಾಯಾಲಯವು ತೀರ್ಪು ನೀಡಿತ್ತು.
ಛಡ್ಡಾರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಿದ ಬಳಿಕ ಛಡ್ಡಾ ಅವರಿಗೆ ಬಂಗಲೆ ಹಂಚಿಕೆಯನ್ನು ರದ್ದುಗೊಳಿಸಲಾಗಿತ್ತು. ಸಂಸದರ ಸಹಿಗಳನ್ನು ಫೋರ್ಜರಿ ಮಾಡಿದ್ದ ಮತ್ತು ಅವರ ಒಪ್ಪಿಗೆಯಿಲ್ಲದೆ ಅವರನ್ನು ಸಮಿತಿಯೊಂದಕ್ಕೆ ಶಿಫಾರಸು ಮಾಡಿದ್ದ ಆರೋಪದಲ್ಲಿ ಛಡ್ಡಾ ಅವರನ್ನು ಅಮಾನತುಗೊಳಿಸಲಾಗಿದೆ.
ತನ್ನನ್ನು ಅನಿರ್ದಿಷ್ಟಾವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಛಡ್ಡಾ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸೋಮವಾರ ರಾಜ್ಯಸಭಾ ಸಚಿವಾಲಯಕ್ಕೆ ನೋಟಿಸ್ ಹೊರಡಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಈ ವಿಷಯದಲ್ಲಿ ನ್ಯಾಯನಿರ್ಣಯಕ್ಕೆ ಅಟಾರ್ನಿ ಜನರಲ್ ನೆರವನ್ನು ಕೋರಿತ್ತು. ಸರ್ವೋಚ್ಚ ನ್ಯಾಯಾಲಯವು ಛಡ್ಡಾ ಅರ್ಜಿಯ ವಿಚಾರಣೆಯನ್ನು ಅ.30ರಂದು ನಡೆಸಲಿದೆ.
ವಿಚಾರಣಾ ನ್ಯಾಯಾಲಯಕ್ಕೆ ಮೂರು ದಿನಗಳಲ್ಲಿ ದೂರು ಸಲ್ಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಛಡ್ಡಾರಿಗೆ ಸೂಚಿಸಿದೆ.