ಏಕರೂಪ ನಾಗರಿಕ ಸಂಹಿತೆಗೆ ಆಪ್ ಬೆಂಬಲ: ಪಕ್ಷ ತೊರೆದ ಬುಡಕಟ್ಟು ನಾಯಕ
Photo: PTI
ಹೊಸದಿಲ್ಲಿ: ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆಗೆ ‘ತಾತ್ವಿಕ’ ಬೆಂಬಲ ನೀಡಿದ್ದಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಗುಜರಾತ್ ನ ಬುಡಕಟ್ಟು ನಾಯಕರೊಬ್ಬರು ರಾಜೀನಾಮೆ ನೀಡಿದ್ದಾರೆ.
2022ರ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಮೀಸಲು ವಿಧಾನಸಭಾ ಕ್ಷೇತ್ರವಾದ ನರ್ಮದಾ ಜಿಲ್ಲೆಯ ನಂದೋಡ್ ನಲ್ಲಿ ಆಮ್ ಆದ್ಮಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಪ್ರಫುಲ್ ವಾಸವ ಆಮ್ ಆದ್ಮಿಗೆ ರಾಜೀನಾಮೆ ನೀಡಿದವರು. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಪ್ರಫುಲ್ ವಾಸವ ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಮೇಲಿನ ದಾಳಿ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷವು ಬುಡಕಟ್ಟು ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಮಾತನಾಡುವುದಿಲ್ಲ. ಆದರೆ ಇದೇ ಸಂದರ್ಭ ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ನೀಡುತ್ತದೆ. ಈ ಸಂಹಿತೆಯು ಆದಿವಾಸಿಗಳಿಗೆ ನೀಡಿದ ವಿಶೇಷ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಕೇಂದ್ರವು "ಆದಿವಾಸಿಗಳ" ಹತ್ಯೆ ನಡೆಸುತ್ತಿದೆ ಎಂದು ಪತ್ರದಲ್ಲಿ ಅವರು ಆರೋಪಿಸಿದ್ದರು, ಮೂಲಭೂತವಾದ ಮತ್ತು ದ್ವೇಷದ ರಾಜಕೀಯವನ್ನು ವಿರೋಧಿಸಲು ಆಮ್ ಆದ್ಮಿ ಪಕ್ಷವನ್ನು ಒತ್ತಾಯಿಸಿದ್ದಾರೆ.
ಆದಿವಾಸಿಗಳು, ಪರಿಶಿಷ್ಟ ಜಾತಿ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳು, ಜೀವನಶೈಲಿ ಮತ್ತು ಸಾಮಾಜಿಕ ರಚನೆಗೆ ಏಕರೂಪ ನಾಗರಿಕ ಸಂಹಿತೆ ಬೆದರಿಕೆಯಾಗಿದೆ. ಹೀಗಾಗಿ ಎಎಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ವಾಸವ ತಿಳಿಸಿದ್ದಾರೆ.