ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿ ಹೋರಾಟಕ್ಕೆ ಆಪ್ ನಿರ್ಧಾರ | ಚತುಷ್ಕೋನ ಸ್ಪರ್ಧೆಯತ್ತ ರಾಜ್ಯ
ಸಂಜಯ ಸಿಂಗ್ | PC : PTI
ಹೊಸದಿಲ್ಲಿ : ತನ್ನೊಂದಿಗೆ ಮೈತ್ರಿಗೆ ಕಾಂಗ್ರೆಸ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್)ಯು ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ 90 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಶುಕ್ರವಾರ ಪ್ರಕಟಿಸಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಆಪ್ ಮತ್ತು ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಮೈತ್ರಿಯಲ್ಲಿ ಸ್ಪರ್ಧಿಸಿದ್ದವು. ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಪ್ ಬಿಜೆಪಿಯಿಂದ ಪರಾಭವಗೊಂಡಿತ್ತು.
ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಗ್ಯಾರಂಟಿಗಳನ್ನು ಆಪ್ ಜು.20ರಂದು ಪ್ರಕಟಿಸಲಿದೆ.
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪ್ರಬಲವಾಗಿ ಹೋರಾಡಲಿದೆ. ಅದು ರಾಜ್ಯದ ಎಲ್ಲ 90 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದು ರಾಜ್ಯಸಭಾ ಸಂಸದ ಸಂಜಯ ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಪ್ ನಿರ್ಧಾರವು ಹರ್ಯಾಣದಲ್ಲಿ ಚತುಷ್ಕೋನ ಸ್ಪರ್ಧೆಗೆ ಕಾರಣವಾಗಲಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್ಪಿ-ಐಎನ್ಎಲ್ಡಿ ಕಣದಲ್ಲಿರುವ ಇತರ ಮೂರು ಸ್ಪರ್ಧಿಗಳಾಗಿವೆ. ಮುಂಬರುವ ವಿಧಾನಸಭಾ ಚುನಾವಣೆಗಾಗಿ ಐಎನ್ಎಲ್ಡಿ ಮತ್ತು ಬಿಎಸ್ಪಿ ಇತ್ತೀಚಿಗೆ ಮೈತ್ರಿ ಮಾಡಿಕೊಂಡಿವೆ.
ಆಪ್ ಹರ್ಯಾಣದಲ್ಲಿ ಹಲವಾರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ ಗೆಲುವಿನ ರುಚಿಯನ್ನು ಇನ್ನೂ ಕಂಡಿಲ್ಲ. ಹರ್ಯಾಣ ಲೋಕಸಭಾ ಚುನಾವಣೆಗಳಲ್ಲಿ ಆಪ್ ಕಾಂಗ್ರೆಸ್ ಜೊತೆ ಮೈತ್ರಿಯಲ್ಲಿ ಸ್ಪರ್ಧಿಸಿತ್ತು. ಕಾಂಗ್ರೆಸ್ ತಾನು ಸ್ಪರ್ಧಿಸಿದ್ದ ಒಂಭತ್ತು ಲೋಕಸಭಾ ಕ್ಷೇತ್ರಗಳ ಪೈಕಿ ಐದನ್ನು ಗೆದ್ದುಕೊಂಡಿದ್ದರೆ ಆಪ್ ಶೂನ್ಯ ಸಾಧನೆ ಮಾಡಿತ್ತು.