ಶಿಕ್ಷಕನ ಅಪಹರಣ; ಬಂದೂಕು ತೋರಿಸಿ ತನ್ನ ಪುತ್ರಿಯ ಜೊತೆ ಬಲವಂತವಾಗಿ ವಿವಾಹ ಮಾಡಿದ ಅಪಹರಣಕಾರ
ಬಿಹಾರದಲ್ಲೊಂದು “ಪಕಡ್ವಾ ವಿವಾಹ್’
Photo: NDTV
ಪಾಟ್ನಾ: ಇತ್ತೀಚೆಗಷ್ಟೆ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಗೌತಮ್ ಕುಮಾರ್ ಎಂಬುವವರು ಶಿಕ್ಷಕರಾಗಿ ನೇಮಕಗೊಂಡಿದ್ದರು. ಬುಧವಾರದಂದು ಅವರು ಬೋಧಿಸುವ ಶಾಲೆಯ ಬಳಿಗೆ ಬಂದಿರುವ ನಾಲ್ವರು ವ್ಯಕ್ತಿಗಳು, ಅವರನ್ನು ಅಪಹರಣ ಮಾಡಿದ್ದಾರೆ. ಇದಾದ 24 ಗಂಟೆಗಳೊಳಗೆ ಬಂದೂಕಿನಿಂದ ಬೆದರಿಸಿ ಅಪಹರಣಕಾರರ ಪೈಕಿ ಓರ್ವ ವ್ಯಕ್ತಿಯ ಪುತ್ರಿಯೊಂದಿಗೆ ಅವರ ವಿವಾಹವನ್ನು ನೆರವೇರಿಸಲಾಗಿದೆ ಎಂದು ndtv.com ವರದಿ ಮಾಡಿದೆ.
ಅವಿವಾಹಿತ ವ್ಯಕ್ತಿಯಾಗಿ ತಮ್ಮ ಬಿರುಗಾಳಿಯಂಥ ಪಯಣವನ್ನು ಆರಂಭಿಸಿದ್ದ ಗೌತಮ್ ಕುಮಾರ್, ಇದೀಗ ಅನಿರೀಕ್ಷಿತ ವಿವಾಹ ಬಂಧನಕ್ಕೆ ಸಿಲುಕಿದ್ದಾರೆ. ಆ ಮೂಲಕ ಬಿಹಾರದ “ಪಕಡ್ವಾ ವಿವಾಹ್’ (ಮದುಮಗನ ಅಪಹರಣ) ಸಾಲಿಗೆ ನೂತನವಾಗಿ ಸೇರ್ಪಡೆಯಾಗಿದ್ದಾರೆ. ಈ ವಿದ್ಯಮಾನದನ್ವಯ, ಅವಿವಾಹಿತ ಪುರುಷರ ತಲೆಗೆ ಬಂದೂಕಿನ ಗುರಿಯಿಟ್ಟು ಬಲವಂತವಾಗಿ ವಿವಾಹ ನೆರವೇರಿಸಲಾಗುತ್ತದೆ.
ಪೊಲೀಸರ ಪ್ರಕಾರ, ಫತೇಪುರದ ರೇಪುರ ಗ್ರಾಮದಲ್ಲಿನ ಉತ್ಕ್ರಮಿತ್ ಮಧ್ಯ ವಿದ್ಯಾಲಯ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡಿದ್ದ ಗೌತಮ್ ಕುಮಾರ್ ಅವರನ್ನು ಬಿಹಾರದ ವೈಶಾಲಿ ಜಿಲ್ಲೆಯಿಂದ ಅಪಹರಣ ಮಾಡಲಾಗಿದೆ. ಈ ಘಟನೆಯ ಬೆನ್ನಿಗೇ, ಕಾಣೆಯಾಗಿರುವ ಶಿಕ್ಷಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ, ಗೌತಮ್ ಕುಮಾರ್ ಅವರ ಕುಟುಂಬದ ಸದಸ್ಯರು ಬುಧವಾರ ರಾತ್ರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಈ ಅಪಹರಣಕ್ಕೆ ರಾಜೇಶ್ ರಾಯ್ ಎಂಬ ವ್ಯಕ್ತಿ ಕಾರಣ ಎಂದು ಗೌತಮ್ ಕುಮಾರ್ ಕುಟುಂಬದ ಸದಸ್ಯರು ದೂಷಿಸಿದ್ದಾರೆ. ರಾಯ್ ಕುಟುಂಬದ ಸದಸ್ಯರು ಗೌತಮ್ ಕುಮಾರ್ ಅವರನ್ನು ಬಲವಂತವಾಗಿ ಕರೆದೊಯ್ದು, ರಾಯ್ ಪುತ್ರಿ ಚಾಂದನಿಯೊಂದಿಗೆ ವಿವಾಹ ನೆರವೇರಿಸಿದ್ದಾರೆ ಎಂದು ಅವರು ದೂರಿದ್ದಾರೆ.
ವಿವಾಹ ಪ್ರಸ್ತಾವನೆಯನ್ನು ನಿರಾಕರಿಸಿರುವ ಗೌತಮ್ ಕುಮಾರ್ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ, ನಾವಡಾ ಸೇನಾ ಯೋಧ ಹಾಗೂ ಲಕ್ಷಿಸರಾಯಿ ಯುವತಿಯೊಬ್ಬಳೊಂದಿಗೆ ನಡೆದಿದ್ದ ಬಲವಂತದ ವಿವಾಹಕ್ಕೆ ಪಾಟ್ನಾ ಹೈಕೋರ್ಟ್ 10 ವರ್ಷಗಳ ಶಿಕ್ಷೆ ವಿಧಿಸಿತ್ತು ಎಂಬ ಸಂಗತಿಯನ್ನು ಗೌತಮ್ ಕುಮಾರ್ ಅಪಹರಣಕಾರರ ಗಮನಕ್ಕೆ ತಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದು, ಅಪಹರಣಕಾರರ ವಿರುದ್ಧ ತನಿಖೆ ಪ್ರಾರಂಭಿಸಿದ್ದಾರೆ.
ಮದುಮಗನನ್ನು ಅಪಹರಿಸಿ ವಿವಾಹ ನೆರವೇರಿಸುವುದು ಬಿಹಾರದಲ್ಲಿ ಅಸಹಜ ಸಂಗತಿಯೇನೂ ಅಲ್ಲ. ಕಳೆದ ವರ್ಷ ಅಸ್ವಸ್ಥ ಜಾನುವಾರಿಗೆ ಚಿಕಿತ್ಸೆ ನೀಡಬೇಕು ಎಂದು ಪಶು ವೈದ್ಯರೊಬ್ಬರನ್ನು ಕರೆಸಿಕೊಂಡು, ನಂತರ ಅವರನ್ನು ಮೂವರು ವ್ಯಕ್ತಿಗಳು ಅಪಹರಿಸಿ, ಬಲವಂತವಾಗಿ ಬೇಗುಸರಾಯಿಯಲ್ಲಿ ಅವರಿಗೆ ವಿವಾಹ ನೆರವೇರಿಸಿದ್ದ ಘಟನೆ ನಡೆದಿತ್ತು. ಇದಕ್ಕೂ ಕೆಲವು ವರ್ಷಗಳ ಹಿಂದೆ, ಇಂತಹುದೇ ಘಟನೆಯಲ್ಲಿ ಸಂತ್ರಸ್ತನಾಗಿದ್ದ ಬಿಹಾರದ ಎಂಜಿನಿಯರ್ ಒಬ್ಬರು ರಾಷ್ಟ್ರೀಯ ಮಾಧ್ಯಮಗಳಲ್ಲಿ ತಲೆಬರಹದ ಸುದ್ದಿಯಾಗಿದ್ದರು. ಈ ಘಟನೆಯ ನಂತರ ಬೊಕಾರೊ ಉಕ್ಕು ಘಟಕದಲ್ಲಿ ಕಿರಿಯ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ವಿನೋದ್ ಕುಮಾರ್ ಎಂಬ ಯುವಕನ ಮೇಲೂ ಹಲ್ಲೆ ನಡೆಸಿ, ಪಾಟ್ನಾದಲ್ಲಿನ ಪಂಡಾರಕ್ ಪ್ರದೇಶದಲ್ಲಿನ ಯುವತಿಯೋರ್ವಳೊಂದಿಗೆ ಬಲವಂತವಾಗಿ ವಿವಾಹ ನೆರವೇರಿಸಲಾಗಿತ್ತು.