‘‘ಮೂಲ ಅಸ್ಮಿತೆʼಗೆ ಮರಳಿದರೆ ಮುಸ್ಲಿಮರಿಗೆ ಮೂಲನಿವಾಸಿ ಸ್ಥಾನಮಾನ : ಅಸ್ಸಾಮ್ ಸಿಎಂ
ಹಿಮಂತ ಬಿಸ್ವ ಶರ್ಮ | Photo: PTI
ಗುವಾಹಟಿ : ಮೊಘಲರ ಕಾಲದಲ್ಲಿ ಬಲವಂತವಾಗಿ ಇಸ್ಲಾಮ್ ಗೆ ಮತಾಂತರಗೊಂಡವರು ತಮ್ಮ ‘‘ಮೂಲ ಅಸ್ಮಿತೆ’’ಗೆ ಮರಳಿದರೆ ಮೂಲನಿವಾಸಿಗಳ ಸ್ಥಾನಮಾನ ಪಡೆಯಬಹುದು ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಗುರುವಾರ ಹೇಳಿದ್ದಾರೆ.
ಅವರು ಮೂಲನಿವಾಸಿ ಸಮುದಾಯಗಳಿಗೆ ಭೂಹಕ್ಕುಗಳನ್ನು ನೀಡಲು ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅಸ್ಸಾಮ್ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದರು.
‘‘ಇಸ್ಲಾಮ್ ಅಷ್ಟು ಬೇಗ ಭಾರತಕ್ಕೆ ಬರಲಿಲ್ಲ’’ ಎಂದು ಅಸ್ಸಾಮ್ ಮುಖ್ಯಮಂತ್ರಿ ಹೇಳಿದರು. ‘‘ಆದರೆ, ನೀವು ಮತಾಂತರಗೊಳ್ಳುವ ಮೊದಲು ಸೇರಿದ್ದ ಸಮುದಾಯದ ಆಧಾರದಲ್ಲಿ ಮೂಲನಿವಾಸಿ ಸ್ಥಾನಮಾನವನ್ನು ಬಯಸುವಿರಾದರೆ, ನಿಮಗೆ ಮೂಲನಿವಾಸಿ ಸ್ಥಾನಮಾನ ಸಿಗುತ್ತದೆ. ಹೆಚ್ಚಿನವರು ಸ್ವ ಇಚ್ಛೆಯಿಂದ ಮತಾಂತರಗೊಳ್ಳಲಿಲ್ಲ, ಔರಂಗಜೇಬ (17ನೇ ಶತಮಾನದ ಮೊಘಲ್ ದೊರೆ)ನ ಕತ್ತಿಗೆ ಹೆದರಿ ಮತಾಂತರಗೊಂಡರು. ಹಾಗಾಗಿ, ಅವರು ತಮ್ಮ ಮೂಲ ನೆಲೆಗೆ ಹಿಂದಿರುಗಬೇಕು’’ ಎಂದು ಶರ್ಮ ಅಭಿಪ್ರಾಯಪಟ್ಟರು.
‘ಮಿಶನ್ ಬಸುಂಧರಾ’ ಯೋಜನೆಯಡಿ ಭೂರಹಿತ ವಲಸಿಗ ಮುಸ್ಲಿಮರು ಅಥವಾ ಬಂಗಾಳ ಮೂಲದ ಮುಸ್ಲಿಮರಿಗೆ ಭೂಮಿ ಹಕ್ಕು ಸಿಗುವುದಿಲ್ಲ ಎಂದರು. ಮೂಲನಿವಾಸಿಗಳಿಗೆ ಜಮೀನು ವಿತರಿಸುವ ಉದ್ದೇಶದ 2019ರ ನೀತಿಯೊಂದರ ಆಧಾರದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ.