370ನೇ ವಿಧಿ ರದ್ದುಪಡಿಸಿದರೂ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಯಂತ್ರಣ ವಿಫಲ: ಫಾರೂಕ್ ಅಬ್ದುಲ್ಲಾ
PC: PTI
ಶ್ರೀನಗರ: ಶಾಂತಿ ಎಂದರೆ ಬೀದಿಗಳಲ್ಲಿ ಶಸ್ತ್ರಸಜ್ಜಿತ ಪಡೆಗಳು ಇರಬಾರದು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರಲ್ಲಿ ಸಹಜತೆ ಮರಳಿದೆ ಎಂಬ ಕೇಂದ್ರದ ವಾದವನ್ನು ಅವರು ತಳ್ಳಿಹಾಕಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂವಿಧಾನದ 370ನೇ ವಿಧಿ ಕಾರಣ ಎಂದು ನೀವು ಇನ್ನೂ ನಂಬುತ್ತೀರಾ ಎಂದು ಎನ್ ಡಿಎ ಕೂಟವನ್ನು ಖಾರವಾಗಿ ಪ್ರಶ್ನಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಇಡೀ ಪ್ರದೇಶದಲ್ಲಿ ಸಂಪೂರ್ಣ ನಿಯಂತ್ರಣ ಹೊಂದಿದ್ದರೂ, ಕೇಂದ್ರ ಸರ್ಕಾರ ಭಯೋತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದ್ದಾರೆ.
"ಎಷ್ಟು ಸೈನಿಕರು? ಎಷ್ಟು ಸಶಸ್ತ್ರ ಪಡೆಗಳು? ಬೀದಿಯಲ್ಲಿ ನಡೆದಾಡುತ್ತಾ ಅವರು ಹೇಗೆ ಶಸ್ತ್ರಸಜ್ಜಿತರಾಗಿದ್ದಾರೆ ಎನ್ನುವುದನ್ನು ನೋಡಿ. ಇದು ಶಾಂತಿಯೇ? ಈ ಪಡೆಗಳು ಇಲ್ಲದೇ ನಿಜವಾದ ಶಾಂತಿ ಸ್ಥಾಪನೆಯಾಗಬೇಕು" ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.