ದೇಣಿಗೆ ಸಂಗ್ರಹಕ್ಕೆ ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಕಾಂಗ್ರೆಸ್ ಆರೋಪ
ಜೈರಾಮ್ ರಮೇಶ್ | Photo: PTI
ಹೊಸದಿಲ್ಲಿ : ಖಾಸಗಿ ಕಂಪೆನಿಗಳಿಂದ ದೇಣಿಗೆ ಸುಲಿಗೆ ಮಾಡಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ಅಲ್ಲದೆ, ಈ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, 2018-19 ಮತ್ತು 2022-23 ಹಣಕಾಸು ವರ್ಷಗಳಲ್ಲಿ ಕನಿಷ್ಠ 30 ಕಂಪೆನಿಗಳು ಬಿಜೆಪಿಗೆ ಒಟ್ಟು ಸುಮಾರು 335 ಕೋಟಿ ರೂ. ದೇಣಿಗೆ ನೀಡಿವೆ. ಈ ಅವಧಿಯಲ್ಲಿ ಈ ಕಂಪೆನಿಗಳು ಜಾರಿ ನಿರ್ದೇಶನಾಲಯದ ಕ್ರಮವನ್ನು ಎದುರಿಸಿದ್ದವು ಎಂದಿದ್ದಾರೆ.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನಾ ಉಸ್ತುವಾರಿ) ಕೆ.ಸಿ. ವೇಣುಗೋಪಾಲ್ ಅವರು ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಗೆ ದೇಣಿಗೆ ನೀಡುವಂತೆ ಖಾಸಗಿ ಕಂಪೆನಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿರುವ ಜೈರಾಮ್ ರಮೇಶ್, ಬಿಜೆಪಿಯ ಹಣಕಾಸಿನ ವ್ಯವಹಾರದ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಹಣಕಾಸಿನ ವಿಷಯದ ಕುರಿತು ನಿಮ್ಮ ಬಳಿ ಮುಚ್ಚಿಡಲು ಏನೂ ಇಲ್ಲದಿದ್ದರೆ, ಬಿಜೆಪಿಯ ಖಜಾನೆ ತುಂಬಲು ಕಾರಣವಾದ ಅಂಶಗಳನ್ನು ಕಾಲಾನುಕ್ರಮವಾಗಿ ಪ್ರಸ್ತುತಪಡಿಸಲು ನೀವು ಸಿದ್ಧರಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ.
ಒಂದು ವೇಳೆ ನೀವು ವಾಸ್ತವಿಕ ವಿವರಣೆಯನ್ನು ನೀಡಲು ಸಿದ್ಧರಿಲ್ಲದಿದ್ದರೆ, ಬಿಜೆಪಿಗೆ ಬರುತ್ತಿರುವ ದೇಣಿಗೆಯ ಸಂಶಯಾಸ್ಪದ ವ್ಯವಹಾರಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಹಾಜರಾಗಲು ನೀವು ಸಿದ್ಧರಿದ್ದೀರಾ? ಎಂದು ಕೂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಈ ವಿಷಯದ ಕುರಿತ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಯುವ ಅಗತ್ಯತೆ ಇದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.