ಮೋದಿ, ಅಮಿತ್ ಶಾ ವಿರುದ್ಧ ನಿಂದನೀಯ ಭಾಷೆ ಬಳಕೆ ಆರೋಪ: ಸಮಾಜವಾದಿ ಪಕ್ಷದ ನಾಯಕನ ಬಂಧನ
ನರೇಂದ್ರ ಮೋದಿ , ಅಮಿತ್ ಶಾ | PC : PTI
ಬಲ್ಲಿಯಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ಸ್ಥಳೀಯ ನಾಯಕರೋರ್ವರನ್ನು ಬಂಧಿಸಲಾಗಿದೆ ಹಾಗೂ 22 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ವರುಣ್ ಕುಮಾರ್ ರಾಕೇಶ್ ಅವರು ಭೀಮಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ ಸಮಾಜವಾದಿ ಪಕ್ಷದ ನಾಯಕ ಫತೇಹ್ ಬಹದ್ದೂರ್ ಯಾದವ್ ಹಾಗೂ ಸೀಮಾ ಭಾರ್ತಿ, ಪುಷ್ಪ ದೇವಿ, ಸಂಜು ದೇವಿ, ರೀನಾ ದೇವಿ, ಮನೀಷಾ ದೇವಿ, ಮನ್ಶಾ ದೇವಿ, ಊರ್ಮಿಳಾ, ಮನಾತಿ, ನಿಶಾ, ಚಂದ್ರಾವತಿ, ರಾಧಿಕಾ ದೇವಿ, ಇತರ 10 ಮಂದಿ ಅಪರಿಚಿತರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಾದ 132, 285, 287, 292, 352ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳು ಇಲ್ಲಿನ ಸಿಕರಿಯಾ ಕಾಲುವೆ ಸಮೀಪ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹಿಸಿದ್ದಾರೆ ಹಾಗೂ ಅವರ ವಿರುದ್ಧ ನಿಂದನೀಯ ಭಾಷೆಗಳನ್ನು ಬಳಸಿದ್ದಾರೆ ಎಂದು ಎಫ್ಐಆರ್ ಅನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
ಅವರು ಸರಕಾರಿ ಕಾರ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಹಾಗೂ ರಸ್ತೆ ಸಂಚಾರಕ್ಕೆ ತಡೆ ಒಡ್ಡಿದ್ದಾರೆ ಎಂದು ಕೂಡ ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
‘‘ಪೊಲೀಸರು ಆರೋಪಿ ಸಮಾಜವಾದಿ ಪಕ್ಷದ ನಾಯಕನನ್ನು ರವಿವಾರ ಬಂಧಿಸಿದ್ದಾರೆ’’ ಎಂದು ಭೀಮ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಮದನ್ ಲಾಲ್ ಪಟೇಲ್ ಹೇಳಿದ್ದಾರೆ.