ಮಮತಾ ಬ್ಯಾನರ್ಜಿ ಕುರಿತು ನಿಂದನಾತ್ಮಕ ಹೇಳಿಕೆ: ವ್ಯಾಪಕ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಬಿಜೆಪಿ ಸಂಸದ
ಮಮತಾ ಬ್ಯಾನರ್ಜಿ, ದಿಲೀಪ್ ಘೋಷ್ | Photo: PTI
ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಬಗ್ಗೆ ನಿಂದನಾತ್ಮಕ ಮಾತುಗಳನ್ನಾಡಿ ಬಿಜೆಪಿ ಸಂಸದ ದಿಲೀಪ್ ಘೋಷ್ ವಿವಾದಕ್ಕೀಡಾಗಿದ ಬೆನ್ನಲ್ಲೇ ಇಂದು ಅವರು ಕ್ಷಮೆಯಾಚಿಸಿದ್ದಾರೆ.
“ದೀದಿ ತಾನು ಭೇಟಿ ನೀಡಿದ ರಾಜ್ಯಗಳ ಮಗಳು ತಾವೆನ್ನುತ್ತಾರೆ. ದೀದಿ ಗೋವಾಗೆ ಹೋದಾಗ ತಾನು ಗೋವಾದ ಮಗಳು ಎನ್ನುತ್ತಾರೆ. ತ್ರಿಪುರಾಗೆ ಹೋದಾಗ ತ್ರಿಪುರಾದ ಮಗಳೆನ್ನುತ್ತಾರೆ. ಮೊದಲು ಆಕೆ ತಮ್ಮ ಸ್ವಂತ ತಂದೆಯನ್ನು ಗುರುತಿಸಬೇಕು,” ಎಂದು ಘೋಷ್ ಹೇಳಿರುವ ವೀಡಿಯೋ ವೈರಲ್ ಆಗಿತ್ತು.
ಈ ಕುರಿತು ಟಿಎಂಸಿ ಪಶ್ಚಿಮ ಬಂಗಾಳ ಚುನಾವಣಾಧಿಕಾರಿಗೆ ದೂರು ನೀಡಿ ಘೋಷ್ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿತ್ತು.
ಮಮತಾ ಬ್ಯಾನರ್ಜಿ ಅವರ ಕುರಿತು ನಿಂದನಾತ್ಮಕ ಹೇಳಿಕೆಗೆ ಸ್ಪಷ್ಟನೆ ಕೋರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ದಿಲೀಪ್ ಘೋಷ್ ಕ್ಷಮೆಯಾಚಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.