‘ಆಪರೇಷನ್ ಕಮಲ’ ಆರೋಪಕ್ಕೆ ಪುರಾವೆ ಸಲ್ಲಿಸುವಂತೆ ಕೇಜ್ರಿವಾಲ್ಗೆ ಎಸಿಬಿ ನೋಟಿಸ್

Photo | PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಮುನ್ನ ಬಿಜೆಪಿ ತನ್ನ ಪಕ್ಷದ ಅಭ್ಯರ್ಥಿಗಳಿಗೆ ಲಂಚ ನೀಡಲು ಯತ್ನಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿವರ ನೀಡುವಂತೆ ದಿಲ್ಲಿಯ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಶುಕ್ರವಾರ ಲೀಗಲ್ ನೋಟಿಸ್ ನೀಡಿದ್ದಾರೆ.
ಫೆಬ್ರವರಿ 5ರಂದು ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರದಂದು ನಡೆಯಲಿದೆ. ಇದಕ್ಕೆ ಒಂದು ದಿನ ಮೊದಲು ಈ ಬೆಳವಣಿಗೆ ನಡೆದಿದೆ. ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿ, ಎಎಪಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಮತ್ತು ಇತರ ಎಎಪಿ ಶಾಸಕರು ಆರೋಪಿಸಿದ್ದರು.
ಎಸಿಬಿ ಅಧಿಕಾರಿಗಳು ಕೇಜ್ರಿವಾಲ್ ಅವರ ಫಿರೋಝ್ ಶಾ ರಸ್ತೆಯಲ್ಲಿನ ನಿವಾಸಕ್ಕೆ ತೆರಳಿ ಲೀಗಲ್ ನೋಟಿಸ್ ನೀಡಿದ್ದಾರೆ. ಇದು ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ಜಟಾಪಟಿಯನ್ನು ಹೆಚ್ಚಿಸಿದೆ. ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ ಇದು ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪಿಸಿದ್ದಾರೆ.
ದಿಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತನ್ನ 16 ಅಭ್ಯರ್ಥಿಗಳಿಗೆ ಬಿಜೆಪಿ ಕರೆ ಮಾಡಿ 15 ಕೋಟಿ ರೂ. ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿದೆ ಎಂದು ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನಲ್ಲಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ವಿವರವಾದ ಮಾಹಿತಿಯನ್ನು ಒದಗಿಸುವಂತೆ ಕೇಜ್ರಿವಾಲ್ ಗೆ ಎಸಿಬಿ ನೋಟಿಸ್ ನೀಡಿದೆ.
ಆಪ್ ಆರೋಪಗಳ ವಿರುದ್ಧ ದಿಲ್ಲಿ ಬಿಜೆಪಿ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ದೂರು ಸಲ್ಲಿಸಿದ ಬಳಿಕ ಉಪ ರಾಜ್ಯಪಾಲರ ತನಿಖಾ ಆದೇಶವು ಹೊರಬಿದ್ದಿದೆ. ಅರವಿಂದ ಕೇಜ್ರಿವಾಲ್ ಮತ್ತು ಸಂಜಯ ಸಿಂಗ್ ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ತಕ್ಷಣದ ತನಿಖೆ ಅಗತ್ಯವಾಗಿದೆ ಎಂದು ಮಿತ್ತಲ್ ತನ್ನ ದೂರಿನಲ್ಲಿ ಹೇಳಿದ್ದು, ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಆಪ್ ನಾಯಕರು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಎಂದು ತಿಳಿಸಿದ್ದಾರೆ.
ಫೋನ್ ಕರೆಗಳನ್ನು ಸ್ವೀಕರಿಸಿದ 16 ಅಭ್ಯರ್ಥಿಗಳ ಹೆಸರುಗಳು, ಅವರನ್ನು ಸಂಪರ್ಕಿಸಿದವರ ಫೋನ್ ಸಂಖ್ಯೆಗಳು ಮತ್ತು ಈ ಆರೋಪವನ್ನು ಸಾಬೀತುಪಡಿಸಲು ಪುರಾವೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ʼನೀವು ಮತ್ತು ನಿಮ್ಮ ಪಕ್ಷದ ಸದಸ್ಯರು ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಲಂಚದ ಆರೋಪ ಮಾಡಿರುವ ಬಗ್ಗೆ ಪುರಾವೆಗಳನ್ನು ಒದಗಿಸಬೇಕು. ಇಂತಹ ಹೇಳಿಕೆಗಳ ಮೂಲಕ ದಿಲ್ಲಿಯ ಜನರಲ್ಲಿ ಭಯ ಮತ್ತು ಅಶಾಂತಿ ಸೃಷ್ಟಿಸುವವರನ್ನು ಏಕೆ ವಿಚಾರಣೆಗೆ ಒಳಪಡಿಸಬಾರದು ಎಂದು ವಿವರಿಸುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಎಪಿಯ ಕಾನೂನು ವಿಭಾಗದ ಮುಖ್ಯಸ್ಥ ಸಂಜೀವ್ ನಾಸಿಯಾರ್, ಎಸಿಬಿ ಅಧಿಕಾರಿಗಳ ಬಳಿ ಆರಂಭದಲ್ಲಿ ಯಾವುದೇ ಲೀಗಲ್ ನೋಟಿಸ್ ಇರಲಿಲ್ಲ ಮತ್ತು ಅವರಿಗೆ ತಮ್ಮ ಉದ್ದೇಶದ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಇದರಿಂದಾಗಿ ಅವರು ಕೇಜ್ರಿವಾಲ್ ಅವರ ಮನೆಯ ಹೊರಗೆ ಕುಳಿತಿದ್ದರು ಎಂದು ಹೇಳಿದ್ದಾರೆ.