ಎಸಿಬಿ ದಾಳಿಯಾಗುತ್ತಿದ್ದಂತೆ ಲಂಚದ ಹಣ 60 ಸಾವಿರ ರೂ. ʼಟಾಯ್ಲೆಟ್ ಫ್ಲಶ್ʼ ಮಾಡಿದ ಅಗ್ನಿಶಾಮಕ ಅಧಿಕಾರಿ!

PC : indianexpress.com
ಮುಂಬೈ: ಎಸಿಬಿ ಬಲೆಗೆ ಬಿದ್ದ ನಂತರ, ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿ ಫ್ಲಶ್ ಮಾಡಿದ್ದ ಲಂಚದ ಮೊತ್ತವನ್ನು ಶುಕ್ರವಾರ ಎಸಿಬಿ ಅಧಿಕಾರಿಗಳು ಸೆಪ್ಟಿಕ್ ಟ್ಯಾಂಕ್ ನಲ್ಲಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ 40 ವರ್ಷದ ಮಧ್ಯವರ್ತಿ ಅಧಿಕಾರಿಯೊಬ್ಬರು ನೀಡಿದ್ದ ದೂರನ್ನು ಆಧರಿಸಿ ಎಸಿಬಿ ಕಾರ್ಯಾಚರಣೆಗೆ ಚಾಲನೆ ನೀಡಿತ್ತು. ಆ ಕಂಪನಿಯ ಸೇವೆಯನ್ನು ಬೊರಿವಲಿಯಲ್ಲಿರುವ ಹೋಟೆಲ್ ಒಂದು ಪಡೆದುಕೊಂಡಿದೆ. ಒಂದು ತಿಂಗಳ ಹಿಂದೆ ಸದರಿ ಮಧ್ಯವರ್ತಿ ಅಧಿಕಾರಿಯ ಮೂಲಕ ಆ ಹೋಟೆಲ್ ತನ್ನಲ್ಲಿ ಪಿಎನ್ಜಿ ಅನಿಲ ಸಂಪರ್ಕವನ್ನು ಸ್ಥಾಪಿಸಲು ಬೃಹನ್ ಮುಂಬೈ ಅಗ್ನಿ ಶಾಮಕ ಪೋರ್ಟಲ್ ನಲ್ಲಿ ನಿರಾಕ್ಷೇಪಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿತ್ತು.
ನಂತರ ದೂರುದಾರರು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಅಧಿಕಾರಿ ಪ್ರಹ್ಲಾದ್ ಶಿತೋಲೆಯನ್ನು ದಹಿಸರ್ ನ ನ್ಯೂ ಲಿಂಕ್ ರಸ್ತೆಯಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿದ್ದರು. ತಮ್ಮ ಕಚೇರಿ ಇರುವ ಕಟ್ಟಡದ ನಾಲ್ಕನೆಯ ಮಹಡಿಯಲ್ಲೇ ಶಿತೋಲೆ ವಾಸಿಸುತ್ತಿದ್ದಾರೆ.
“ಸ್ಥಳ ಪರಿಶೀಲನೆ ನಡೆಸಿದ ನಂತರ, ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕ ಹಾಕಿ, ನಿರಾಕ್ಷೇಪಣಾ ಪತ್ರಕ್ಕಾಗಿ ರೂ. 1,30,000 ಮೊತ್ತವನ್ನು ಪಾವತಿಸುವಂತೆ ಅವರು ಆರಂಭದಲ್ಲಿ ಬೇಡಿಕೆ ಇರಿಸಿದ್ದರು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಲಂಚ ನೀಡಲು ಮಧ್ಯವರ್ತಿ ಅಧಿಕಾರಿಯು ನಿರಾಕರಿಸಿದಾಗ, ಶಿತೋಲೆ ತಮ್ಮ ಬೇಡಿಕೆಯನ್ನು ರೂ. 80,000ಕ್ಕೆ ತಗ್ಗಿಸಿದ್ದಾರೆ. ಆಗಲೂ ಕೂಡಾ ಅವರು ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕ ಮಾಡಿದ್ದಾರೆ. ಬುಧವಾರ ದೂರದಾರರು ಶಿತೋಲೆಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಲು ತೆರಳಿದಾಗ, ರೂ. 50,000ಕ್ಕಿಂತ ಹೆಚ್ಚಿನದಾದ ಯಾವುದೇ ಮೊತ್ತವನ್ನು ನೀಡುವಂತೆ ಮತ್ತೆ ಬೇಡಿಕೆ ಇರಿಸಿದ್ದಾರೆ.
ಆದರೆ, ಲಂಚ ನೀಡಲು ಇಚ್ಛಿಸದ ಮಧ್ಯವರ್ತಿ ಅಧಿಕಾರಿಯು, ಈ ಕುರಿತು ಗುರುವಾರ ವೊರ್ಲಿಯಲ್ಲಿರುವ ಎಸಿಬಿಯ ಮುಖ್ಯ ಕಚೇರಿಗೆ ವರದಿ ಮಾಡಿದ್ದಾರೆ. ದೂರನ್ನು ಪರಿಶೀಲಿಸಿದ ಎಸಿಬಿ, ಶಿತೋಲೆಯನ್ನು ಖುದ್ದಾಗಿ ಬಲೆಗೆ ಬೀಳಿಸಲು ರೂ. 60,000 ಮೊತ್ತವನ್ನು ನೀಡಲು ನಿರ್ಧರಿಸಿದ್ದಾರೆ.
ಶುಕ್ರವಾರ ಲಂಚದ ಮೊತ್ತವಾದ ರೂ. 60,000 ಅನ್ನು ಶಿತೋಲೆ ಸ್ವೀಕರಿಸುವಾಗ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಶಿತೋಲೆಯನ್ನು ಖುದ್ದಾಗಿ ಸೆರೆ ಹಿಡಿದಿದ್ದಾರೆ.
“ನಾವು ಅವರ ಕಚೇರಿಯ ಸುತ್ತ ಬಲೆಯನ್ನು ಹೆಣೆದಿದ್ದೆವು. ಆದರೆ, ಕಚೇರಿಯಲ್ಲಿ ತುಂಬಾ ಜನರಿರುವುದು ಹಾಗೂ ನೋಟಿನ ಮೇಲೆ ಪುಡಿ ಇರುವುದನ್ನು ಕಂಡು ಏನೋ ಅನಾಹುತವಾಗಲಿದೆ ಎಂದು ಗ್ರಹಿಸಿದ ಶಿತೋಲೆ, ನೇರವಾಗಿ ತಮ್ಮ ನಾಲ್ಕನೆ ಮಹಡಿಯಲ್ಲಿರುವ ನಿವಾಸಕ್ಕೆ ಲಿಫ್ಟ್ ಮೂಲಕ ತೆರಳಿ, ಆ ನೋಟುಗಳನ್ನು ಶೌಚಾಲಯದಲ್ಲಿ ಫ್ಲಶ್ ಮಾಡಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಚೇರಿಯಲ್ಲಿ ಶಿತೋಲೆ ಇಲ್ಲದಿರುವುದನ್ನು ಕಂಡು ಎಸಿಬಿ ತಂಡವು, ಅವರ ಮನೆಗೆ ತೆರಳಿದರೂ, ಆರಂಭದಲ್ಲಿ ಅವರಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ನಂತರ ಶಿತೋಲೆ ತಮ್ಮ ಕಚೇರಿಗೆ ಮರಳಿದ್ದು, ಅಲ್ಲಿ ಅವರನ್ನು ಎಸಿಬಿ ತನ್ನ ವಶಕ್ಕೆ ಪಡೆದುಕೊಂಡಿದೆ. ವಿಚಾರಣೆಯ ಸಂದರ್ಭದಲ್ಲಿ ಭಯಭೀತರಾಗಿರುವ ಶಿತೋಲೆ, ತಾನು ನೋಟುಗಳನ್ನು ಫ್ಲಶ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಎಸಿಬಿ ಅಧಿಕಾರಿಗಳು ರೂ. 57,000 ಮೊತ್ತದ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಉಳಿದ ರೂ. 3,000 ಮೊತ್ತವು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.