ಮಧ್ಯಪ್ರದೇಶ ರಾಜಕೀಯಕ್ಕೆ ಗಂಗಾಜಲ ಪ್ರವೇಶ !
MP Congress President Kamal Nath (photo: PTI)
ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಮಾತ್ರ ಉಳಿದಿದ್ದು, ರಾಜ್ಯ ರಾಜಕೀಯಕ್ಕೆ ಗಂಗಾಜಲ ಪ್ರವೇಶಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಬಾರಿ ಗಂಗಾಜಲದ ಭರವಸೆ ನೀಡಿರುವುದು ಕೇಸರಿ ಪಕ್ಷವಲ್ಲ; ಕಾಂಗ್ರೆಸ್ ಎನ್ನುವುದು ಗಮನಿಸಬೇಕಾದ ಅಂಶ.
ರಾಜ್ಯದಲ್ಲಿ ತನ್ನ ಮೃದು ಹಿಂದುತ್ವ ಕಾರ್ಯತಂತ್ರದ ಅಂಗವಾಗಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಸಾರ್ವಜನಿಕರಿಗೆ ಗಂಗಾಜಲ ವಿತರಿಸುವ ವಾಗ್ದಾನ ಮಾಡಿದೆ. ಈ ಅಭಿಯಾನವನ್ನು ನಡೆಸಲು ಪಕ್ಷದ ಓಬಿಸಿ ಘಟಕ ಮುಂದಾಗಿದೆ. ಇಂಧೋರ್ ಲೋಕಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ವಿಭಾಗದ ಮುಖ್ಯಸ್ಥ ಹಿಮಾಂಶು ಯಾದವ್, ಈ ತಿಂಗಳ 27ರಿಂದ ಗಂಗಾಜಲ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಒಂದು ಲಕ್ಷ ಬಾಟಲಿ ಗಂಗಾಜಲವನ್ನು ವಿತರಿಸುವ ಕಾರ್ಯಯೋಜನೆ ಹಮ್ಮಿಕೊಂಡಿದ್ದಾರೆ. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಕಮಲನಾಥ್ ಅವರ 11 ಚುನಾವಣಾ ಭರವಸೆಗಳು ಗಂಗಾಜಲದಷ್ಟೇ ಪರಿಶುದ್ಧ ಎನ್ನುವ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
"ಈಗಾಗಲೇ ಒಂದು ಲಕ್ಷ ಬಾಟಲಿ ಗಂಗಾಜಲವನ್ನು ಪೂರೈಸುವಂತೆ ಕೋರಿದ್ದೇವೆ. ಮುಂದಿನ ದಿನಗಳಲ್ಲಿ ಇದು ಬರಲಿದೆ. ಇಂದೋರ್-3 ವಿಧಾನಸಭಾ ಕ್ಷೇತ್ರದ ಅಗ್ರಸೇನಾದಿಂದ ಚುನಾವಣಾ ಪ್ರಚಾರ ಆರಂಭವಾಗಲಿದ್ದು, ಜಿಲ್ಲೆಯ ಎಲ್ಲ ಒಂಬತ್ತೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಯಲಿದೆ. ಈ ಗಂಗಾಜಲದ ಬಾಟಲಿಗಳಲ್ಲಿ ಸಿಎಂ ಅಭ್ಯರ್ಥಿ ಕಮಲನಾಥ್ ಅವರು ಘೋಷಿಸಿದ ಎಲ್ಲ 11 ಚುನಾವಣಾ ಗ್ಯಾರೆಂಟಿಗಳಿಗೆ ಸಂಬಂಧಿಸಿದ ಚಿತ್ರಗಳಿರುತ್ತವೆ. ಈ ವಚನಗಳು ಗಂಗಾನದಿಯ ನೀರಿನಷ್ಟೇ ಪರಿಶುದ್ಧ ಎನ್ನುವುದನ್ನು ಮನವರಿಕೆ ಮಾಡುವುದು ಇದರ ಉದ್ದೇಶ" ಎಂದು ಯಾದವ್ ವಿವರಿಸಿದ್ದಾರೆ.