ತಪ್ಪಾದ ಗುಂಪಿನ ರಕ್ತ ವರ್ಗಾವಣೆ: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು
ಸಾಂದರ್ಭಿಕ ಚಿತ್ರ (PTI)
ಜೈಪುರ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ 23 ವರ್ಷದ ಯುವಕನೊಬ್ಬನಿಗೆ ಇಲ್ಲಿನ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ತಪ್ಪಾದ ಗುಂಪಿನ ರಕ್ತ ನೀಡಿದ ಪರಿಣಾಮ ಆತ ಮೃತಪಟ್ಟ ಘಟನೆ ನಡೆದಿದೆ. ಘಟನೆಯ ಬೆನ್ನಲ್ಲೇ ರಾಜಸ್ಥಾನ ಸರ್ಕಾರ ಮೂವರು ವೈದ್ಯರನ್ನು ಯಾವುದೇ ಪೋಸ್ಟಿಂಗ್ ನೀಡದೆ ವರ್ಗಾಯಿಸಿದೆ ಹಾಗೂ ನರ್ಸಿಂಗ್ ಸಿಬ್ಬಂದಿಯೊಬ್ಬರನ್ನು ಅಮಾನತುಗೊಳಿಸಿದೆ. ಸಮಿತಿಯೊಂದು ನಡೆಸಿದ ತನಿಖೆಯಿಂದ ಅವರು ತಪ್ಪಿತಸ್ಥರು ಎಂದು ತಿಳಿದು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಕೊಟಪುತಲಿ ಎಂಬಲ್ಲಿ ಫೆಬ್ರವರಿ 12ರಂದು ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಂಡಿಕುಯಿ ಪಟ್ಟಣದ ನಿವಾಸಿ ಸಚಿನ್ ಶರ್ಮ ಎಂಬಾತನನ್ನು ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರೋಗಿಗೆ ರಕ್ತ ವರ್ಗಾವಣೆಗೆ ಸ್ಯಾಂಪಲ್ ಅನ್ನು ನರ್ಸಿಂಗ್ ಅಧಿಕಾರಿ ಅಶೋಕ್ ಕುಮಾರ್ ವರ್ಮ ತೆಗೆದುಕೊಂಡಿದ್ದರು. ರೆಸಿಡೆಂಟ್ ವೈದ್ಯ ಡಾ ರಿಷಭ್ ಚಲನ ಅವರು ರೋಗಿಯ ರೆಕಾರ್ಡ್ನಲ್ಲಿ ಯಾವುದೇ ಟಿಪ್ಪಣಿ ಬರೆದಿರಲಿಲ್ಲ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಡಾ ಎಸ್ ಕೆ ಗೋಯೆಲ್ ಅವರು ಶಸ್ತ್ರಕ್ರಿಯೆ ವೇಳೆ ರಕ್ತ ವರ್ಗಾವಣೆ ಮಾನದಂಡಗಳಿಗೆ ಗಮನ ನೀಡಿರಲಿಲ್ಲ ಎಂದು ಹೇಳಲಾಗಿದೆ.
ಫೆಬ್ರವರಿ 15 ರಂದು ಟ್ರಾಮಾ ಬ್ಲಡ್ ಬ್ಯಾಂಕ್ನಲ್ಲಿ ಕರ್ತವ್ಯದಲ್ಲಿದ್ದ ಡಾ. ದೌಲತ್ರಾಮ್ ತಮ್ಮ ಹಿರಿಯಾಧಿಕಾರಿಗಳಿಗೆ ತಪ್ಪಾದ ರಕ್ತದ ಮಾದರಿಯ ಕುರಿತು ಮಾಹಿತಿ ನೀಡಿರಲಿಲ್ಲ.
ರೋಗಿಯ ಕುಟುಂಬಿಕರು ಪೋಸ್ಟ್ ಮಾರ್ಟಂಗೆ ಅನುಮತಿ ನೀಡದೇ ಇರುವುದರಿಂದ ರೋಗಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ. ರೋಗಿಯ ರಕ್ತದ ಗುಂಪು ಒ ಪಾಸಿಟಿವ್ ಆಗಿದ್ದರೆ ಆತನಿಗೆ ಎಬಿ ಪಾಸಿಟಿವ್ ಗುಂಪಿನ ರಕ್ತ ನೀಡಲಾಗಿತ್ತೆಂದು ಆಸ್ಪತ್ರೆಯ ಅಧೀಕ್ಷಕ ಡಾ. ಅಚಲ್ ಶರ್ಮ ಹೇಳಿದ್ದಾರೆ.