ಶಾಲೆಗೆ ರೂ. 8 ಲಕ್ಷ ದಾನ ನೀಡಿದ ಅಪಘಾತ ಸಂತ್ರಸ್ತ ಬಾಲಕನ ಕುಟುಂಬದ ಸದಸ್ಯರು
ಸಾಂದರ್ಭಿಕ ಚಿತ್ರ
ಕರೀಂನಗರ: ತಳ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಖಾತ್ರಿಗೊಳಿಸುವ ಭಾಗವಾಗಿ 2022ರಲ್ಲಿ ಕರ್ನಾಟಕದಲ್ಲಿ ನಡೆದಿದ್ದ ಅಪಘಾತದಲ್ಲಿ ತಮ್ಮ ಪುತ್ರ ಆದಿತ್ಯ ರೆಡ್ಡಿಯನ್ನು ಕಳೆದುಕೊಂಡಿದ್ದ ದಂಪತಿಗಳಾದ ಕೋಳ ಅನ್ನಾ ರೆಡ್ಡಿ ಹಾಗೂ ಅವರ ಪತ್ನಿ ಲಾವಣ್ಯ ಅವರು ಕರೀಂನಗರದಲ್ಲಿನ ಶ್ರೀ ಸರಸ್ವತಿ ಶಿಶು ಮಂದಿರ ಶಾಲೆಗೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಅವರು ನಿರ್ಮಾಣ ಹಂತದಲ್ಲಿರುವ ಶಾಲೆಗೆ ರೂ. 8 ಲಕ್ಷ ಕೊಡುಗೆ ನೀಡಿದ್ದು, ಈ ಕೊಡುಗೆಯನ್ನು ಅವರು ಶುಕ್ರವಾರ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಅನ್ನಾ ರೆಡ್ಡಿ ಹಾಗೂ ಲಾವಣ್ಯ ದಂಪತಿಗಳು ಈಗಲೂ ತಮ್ಮ ಪುತ್ರನನ್ನು ಕಳೆದುಕೊಂಡ ಸಂತಾಪದಲ್ಲಿದ್ದು, ಅವರು ತಳ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದನ್ನು ಖಾತ್ರಿಪಡಿಸುವ ನಿರ್ಧಾರಕ್ಜೆ ಬಂದಿದ್ದಾರೆ. ಶಾಲೆಯ ಅಭಿವೃದ್ಧಿ ಹಾಗೂ ಯಾರಿಗೆ ಅವಕಾಶಗಳ ಅಗತ್ಯವಿದೆಯೊ ಅಂಥವರಿಗೆ ಉತ್ತಮ ಭವಿಷ್ಯ ಒದಗಿಸುವ ಗುರಿ ಈ ಕೊಡುಗೆಯ ಹಿಂದಿದೆ.
ಅನ್ನಾ ರೆಡ್ಡಿ ರೇಕುರ್ತಿ ದತ್ತಿ ಲಯನ್ಸ್ ನೇತ್ರಾಲಯದ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪ್ರಮುಖ ಆದ್ಯತೆ ದೃಷ್ಟಿ ದೋಷ ಅನುಭವಿಸುತ್ತಿರುವವರಿಗೆ ನೇತ್ರದಾನವನ್ನು ಉತ್ತೇಜಿಸುವುದಾಗಿದೆ. ಅವರು ಈ ಚಳವಳಿಯಲ್ಲಿ 2003ರಿಂದ ಕರೀಂನಗರ, ವಾರಂಗಲ್ ಹಾಗೂ ನೆರೆಯ ಜಿಲ್ಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಅನ್ನಾ ರೆಡ್ಡಿ, ನೇತ್ರದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಗ್ರಾಮೀಣ ಭಾಗದಲ್ಲಿ ಎಷ್ಟು ಜನರನ್ನು ಸಾಧ್ಯವೊ ಅಷ್ಟು ಜನರನ್ನು ತಲುಪಲು ನೇತ್ರ ತಪಾಸಣಾ ಶಿಬಿರಗಳನ್ನು ಏರ್ಪಡಿಸುತ್ತಾ ಬರುತ್ತಿದ್ದಾರೆ. ಈವರೆಗೆ ಅವರು ಸುಮಾರು 2,500 ನೇತ್ರದಾನಗಳನ್ನು ಪಡೆದಿದ್ದು, ಸುಮಾರು 8,000 ಮಂದಿಗೆ ನೇತ್ರದಾನ ಮಾಡುವಂತೆ ಉತ್ತೇಜಿಸಿದ್ದಾರೆ.