ಬಿಹಾರ ಡಿಸಿಎಂ ಜೊತೆ ನೀಟ್ ಹಗರಣದ ಆರೋಪಿಯಿರುವ ಚಿತ್ರ ಹಂಚಿಕೊಂಡ ಆರ್ಜೆಡಿ
Photo: X/@RJDforIndia
ಪಾಟ್ನಾ: RJD ನಾಯಕ ತೇಜಸ್ವಿ ಯಾದವ್ ರೊಂದಿಗೆ ಸಂಪರ್ಕ ಹೊಂದಿರುವ ಅಧಿಕಾರಿಗಳೊಂದಿಗೆ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಮುಖ ಆರೋಪಿಯು ಸಂಬಂಧ ಹೊಂದಿದ್ದಾನೆ ಎಂದು ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಆರೋಪಿಸಿದ ಮರುದಿನವೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಆರೋಪಿ ಅಮಿತ್ ಆನಂದ್, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಜೊತೆಗಿರುವ ಚಿತ್ರವನ್ನು ಆರ್ಜೆಡಿ ಬಿಡುಗಡೆ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಆರ್ಜೆಡಿ, “ಆರೋಪಿಯಿಂದ ಉಪ ಮುಖ್ಯಮಂತ್ರಿಗೆ ಸನ್ಮಾನ ನಡೆದಿದೆ. ಆದರೆ, ಅವರು ಆ ಎಲ್ಲ ಚಿತ್ರಗಳನ್ನೂ ಅಳಿಸಿ ಹಾಕಿದ್ದಾರೆ” ಎಂದು ಆರೋಪಿಸಿದೆ.
“ಬಿಹಾರದ ಉಪ ಮುಖ್ಯಮಂತ್ರಿಯೊಂದಿಗೆ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಮುಖ ಆರೋಪಿ” ಎಂದು ಆರ್ಜೆಡಿ ಟ್ವೀಟ್ ಮಾಡಿದೆ.
ಇದಕ್ಕೂ ಮುನ್ನ, ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಸಿನ್ಹಾ, ನೀಟ್ ಹಗರಣದ ಪ್ರಮುಖ ಆರೋಪಿಯಾದದ ಸಿಕಂದರ್ ಪ್ರಸಾದ್ ಯಾದವೇಂದುರೊಂದಿಗೆ ಅಧಿಕಾರಿಗಳು ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ಆರೋಪಿಸಿದ್ದರು.
“ತೇಜಸ್ವಿ ಯಾದವ್ ರೊಂದಿಗೆ ಸಂಪರ್ಕ ಹೊಂದಿರುವ ಅಧಿಕಾರಿಗಳು ಸಿಕಂದರ್ ಗೆ ಪಾಟ್ನಾ ಹಾಗೂ ಇನ್ನಿತರ ಸ್ಥಳಗಳಲ್ಲಿ ಅತಿಥಿ ಗೃಹದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಸಿಕಂದರ್ ಗೆ ವಾಸ್ತವ್ಯವನ್ನು ಕಲ್ಪಿಸಿದ್ದ ಜನರಿಗೆ ಅಧಿಕಾರಿಗಳು ಸಂದೇಶ ರವಾನಿಸಿರುವ ವಿವರಗಳು ನನ್ನ ಬಳಿ ಇವೆ” ಎಂದು ಸಿನ್ಹಾ ಪ್ರತಿಪಾದಿಸಿದ್ದರು.
ಸಿನ್ಹಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಆರ್ಜೆಡಿ, “ಇದೊಂದು ಸುಳ್ಳುಗಳ ಕಂತೆ. ಮೇ 5ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿರುವ 25 ಲಕ್ಷ ನೀಟ್ ಪರೀಕ್ಷಾರ್ಥಿಗಳ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ” ಎಂದು ದೂರಿದೆ.