ಗರ್ಭಗುಡಿಗೆ ಪ್ರವೇಶ ಯತ್ನ ಆರೋಪ; ರಾಜಮನೆತನದ ಸದಸ್ಯೆಯನ್ನು ದೇವಳದಿಂದ ಹೊರಗೆಳೆದೊಯ್ದ ಪೊಲೀಸರು
Photo: NDTV
ಪನ್ನಾ: ಮಧ್ಯ ಪ್ರದೇಶದ ಪನ್ನಾ ಎಂಬಲ್ಲಿನ ಹಿಂದಿನ ರಾಜಮನೆತನದ ಸದಸ್ಯೆಯಾದ ಜಿತೇಶ್ವರಿ ದೇವಿ ಎಂಬಾಕೆಯನ್ನು ಬುಂದೇಲ್ಖಂಡ್ ಪ್ರಾಂತ್ಯದ ಖ್ಯಾತ ಶ್ರೀ ಜುಗುಲ್ ಕಿಶೋರ್ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ದೇವಳದ ನಿಯಮಕ್ಕೆ ವಿರುದ್ಧವಾಗಿ ಅಲ್ಲಿನ ಗರ್ಭಗುಡಿಗೆ ಪ್ರವೇಶಿಸಿದ್ದಾರೆಂಬ ಆರೋಪದ ಮೇಲೆ ಬಂಧಿಸಲಾಗಿದೆ.
ತಾನೇ ಆರತಿ ಮಾಡುತ್ತೇನೆಂದು ಹಠ ಹಿಡಿದು ಜಿತೇಶ್ವರಿ ದೇವಿ ಅವರು ದೇವಸ್ಥಾನದ ಧಾರ್ಮಿಕ ಪ್ರಕಿಯೆಗೆ ಅಡ್ಡಿ ಮಾಡಿದ್ದಾರೆಂದು ದೇವಳದ ಅಧಿಕಾರಿಗಳು ಆರೋಪಿಸಿದ್ದಾರೆ. ಆಕೆ ಆದರೂ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದ್ದು ಈ ಸಂದರ್ಭ ಎಡವಿ ಬಿದ್ದರೆಂದು ಹೇಳಲಾಗಿದೆ.
ಈ ಸಂದರ್ಭ ಅಲ್ಲಿ ಭಾರೀ ಗೊಂದಲವುಂಟಾಯಿತಲ್ಲದೆ ಪೊಲೀಸರು ಆಗಮಿಸಿ ಆಕೆಗೆ ಅಲ್ಲಿಂದ ಹೊರನಡೆಯುವಂತೆ ಸೂಚಿಸಿದರು. ಈ ಘಟನೆಯ ವೀಡಿಯೋ ವೈರಲ್ ಆಗಿದೆ. ಸ್ಥಳೀಯರ ಪ್ರಕಾರ ಜಿತೇಶ್ವರಿ ದೇವಿ ಮದ್ಯದ ಅಮಲಿನಲ್ಲಿದ್ದರು.
ಈ ಮಾಜಿ ರಾಣಿಯನ್ನು ಪೊಲೀಸರು ದೇವಸ್ಥಾನದಿಂದ ನಂತರ ಹೊರಗೆಳೆದೊಯ್ದರು.
ಪನ್ನಾ ಎಸ್ಪಿ ಪ್ರತಿಕ್ರಿಯಿಸಿ ಅಲ್ಲಿನ ಪದ್ಧತಿ ಪ್ರಕಾರ ರಾಜಮನೆತನದ ಪುರುಷರು ಮಾತ್ರ ಚಾನ್ವರ್ ಎಂಬ ಪ್ರಕ್ರಿಯೆಯನ್ನು ಜನ್ಮಾಷ್ಟಮಿ ಸಂದರ್ಭ ನೆರವೇರಿಸುತ್ತಾರೆ. ಆದರೆ ಜಿತೇಶ್ವರಿಯ ಪುತ್ರನಿಗೆ ಬರಲು ಆಗದೇ ಇದ್ದುದರಿಂದ ಆಕೆ ತಾನೇ ಆ ಪ್ರಕ್ರಿಯೆ ನಡೆಸುವುದಾಗಿ ಹಠ ಹಿಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿ ಆಕೆಯನ್ನು ಬಂಧಿಸಿದರು. ಆಕೆಯನ್ನು ಪೊಲೀಸರು ಹೊರಗೆಳೆದುಕೊಂಡು ಹೋಗುತ್ತಿದ್ದಾಗ ಆಕೆ ಮಧ್ಯಪ್ರದೇಶ ಸರಕಾರದ ವಿರುದ್ಧ ಗಂಬೀರ ಆರೋಪ ಹೊರಿಸಿದ್ದಾರೆ. ರಕ್ಷಣಾ ಕಲ್ಯಾಣ ನಿಧಿಯಿಂದ ಪನ್ನಾದಲ್ಲಿ ರೂ. 65000 ಕೋಟಿ ಅವ್ಯವಹಾರ ನಡೆಸಲಾಗಿದೆ ಎಂದು ಆಕೆ ಆರೋಪಿಸಿದ್ದಾರಲ್ಲದೆ ಈ ಕುರಿತು ದನಿಯೆತ್ತಿದ್ದಕ್ಕೆ ತನ್ನನ್ನು ಬಂಧಿಸಲಾಗುತ್ತಿದೆ ಎಂದು ದೂರಿದ್ದಾರೆ.