ಅಮೆರಿಕದಲ್ಲಿ ಖಲಿಸ್ತಾನಿ ಬೆಂಬಲಿಗನ ಹತ್ಯೆಗೆ ವಿಫಲ ಸಂಚಿನ ಆರೋಪ; ಪರಿಶೀಲನೆಗೆ ಸಮಿತಿ ರಚಿಸಿದ ಭಾರತ
ಗುರ್ಪತ್ವಂತ್ ಸಿಂಗ್ | Photo: NDTV
ಹೊಸದಿಲ್ಲಿ: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಬೆಂಬಲಿಗ ಗುರ್ಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ನಡೆದಿತ್ತೆನ್ನಲಾದ ವಿಫಲ ಸಂಚಿನ ಕುರಿತು ಆ ದೇಶವು ನೀಡಿರುವ ಮಾಹಿತಿಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಿರುವುದಾಗಿ ಕೇಂದ್ರವು ಬುಧವಾರ ತಿಳಿಸಿದೆ.
ವಿಫಲ ಹತ್ಯೆ ಸಂಚನ್ನು ಮೊದಲು ವರದಿ ಮಾಡಿದ್ದ ಬ್ರಿಟನ್ ನ ಫೈನಾನ್ಶಿಯಲ್ ಟೈಮ್ಸ್, ಸಂಚಿನಲ್ಲಿ ಮೋದಿ ಸರಕಾರವು ಭಾಗಿಯಾಗಿದೆ ಎಂಬ ಕಳವಳಗಳ ಕುರಿತು ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿತ್ತು. ಶ್ವೇತ ಭವನದ ಪ್ರಕಾರ,ಈ ಆರೋಪಗಳ ಬಗ್ಗೆ ಭಾರತೀಯ ಅಧಿಕಾರಿಗಳು ಅಚ್ಚರಿ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು,ಅಮೆರಿಕವು ಹಂಚಿಕೊಂಡಿರುವ ಭದ್ರತಾ ಮಾಹಿತಿಗಳು ನಮ್ಮ ಸ್ವಂತ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳ ಮೇಲೂ ಪರಿಣಾಮವನ್ನು ಬೀರುವುದರಿಂದ ಅವುಗಳನ್ನು ಭಾರತವು ಗಂಭೀರವಾಗಿ ಪರಿಗಣಿಸಿದೆ ಎಂಬ ತನ್ನ ಹಿಂದಿನ ಹೇಳಿಕೆಯನ್ನು ಬುಧವಾರ ಪುನರುಚ್ಚರಿಸಿದರು. ಮಾಹಿತಿಗಳು ಸಂಘಟಿತ ಕ್ರಿಮಿನಲ್ ಗಳು, ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರರು ಮತ್ತು ಭಯೋತ್ಪಾದಕರ ನಡುವಿನ ನಂಟಿಗೆ ಸಂಬಂಧಿಸಿವೆ.
ನ.18ರಂದು ರಚಿಸಲಾದ ವಿಚಾರಣಾ ಸಮಿತಿಯ ವರದಿಯ ಆಧಾರದಲ್ಲಿ ಭಾರತವು ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.
ಅಮೆರಿಕನ್-ಕೆನೆಡಿಯನ್ ಪ್ರಜೆಯಾಗಿರುವ ಪುನ್ನೂನ್ ಖಲಿಸ್ಥಾನ್ ಪ್ರತಿಪಾದಕನಾಗಿದ್ದು, ಭಾರತವು 2019ರಲ್ಲಿ ನಿಷೇಧಿಸಿದ್ದ ‘ಸಿಖ್ಸ್ ಫಾರ್ ಜಸ್ಟೀಸ್’ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾನೆ. ಮರುವರ್ಷ ಭಾರತವು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪುನ್ನೂನ್ನನ್ನು ‘ವ್ಯಕ್ತಿಗತ ಭಯೋತ್ಪಾದಕ ’ಎಂದು ಘೋಷಿಸಿತ್ತು.
ಪುನ್ನೂನ್ ಹತ್ಯೆಗೆ ನಡೆದಿತ್ತೆನ್ನಲಾದ ಸಂಚಿನ ಬಗ್ಗೆ ಅಮೆರಿಕದ ಅಧಿಕಾರಿಗಳಿಗೆ ಗೊತ್ತಾಗಿದ್ದು ಹೇಗೆ ಅಥವಾ ಅದನ್ನು ಹೇಗೆ ವಿಫಲಗೊಳಿಸಲಾಗಿತ್ತು ಎನ್ನುವುದು ಸ್ಪಷ್ಟವಾಗಿಲ್ಲ. ಜೂನ್ ನಲ್ಲಿ ಅಧಿಕೃತ ಭೇಟಿಗಾಗಿ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧ್ಯಕ್ಷ ಜೋ ಬೈಡೆನ್ ಸ್ವಾಗತಿಸಿದ ಬಳಿಕ ಭಾರತ ಸರಕಾರಕ್ಕೆ ಪ್ರತಿಭಟನೆಯನ್ನು ಸಲ್ಲಿಸಲಾಗಿತ್ತು.
ಭಾರತಕ್ಕೆ ರಾಜತಾಂತ್ರಿಕ ಎಚ್ಚರಿಕೆಯಲ್ಲದೆ ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ಗಳು ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದಲ್ಲಿ ಕನಿಷ್ಠ ಓರ್ವ ಶಂಕಿತನ ವಿರುದ್ಧ ಬಂದ್ ಮಾಡಿದ ಲಕೋಟೆಯಲ್ಲಿ ದೋಷಾರೋಪಣೆಯನ್ನು ಸಲ್ಲಿಸಿದ್ದಾರೆ. ದೋಷಾರೋಪಣೆ ಪಟ್ಟಿಯನ್ನು ತೆರೆಯಬೇಕೇ ಎಂಬ ಬಗ್ಗೆ ಪ್ರಾಸಿಕ್ಯೂಟರ್ಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.