ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ಸಾವು: ಹೈಕೋರ್ಟ್ ಮೆಟ್ಟಿಲೇರಿದ ಕುಟುಂಬ
PC : NDTV
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದ ಅನುಜ್ ತಪನ್ ಪೊಲೀಸರ ಕಸ್ಟಡಿಯಲ್ಲಿ ಸಾವನ್ನಪ್ಪಿರುವುದರ ವಿರುದ್ಧ ಆತನ ಕುಟುಂಬದ ಸದಸ್ಯರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಅನುಜ್ ತಪನ್ ಲಾಕಪ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಪ್ರತಿಪಾದಿಸಿದ್ದರೆ, ಈ ಕುರಿತು ಶುಕ್ರವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಆತನ ತಾಯಿ ರೀಟಾ ದೇವಿ, ಪೊಲೀಸರು ಈ ವಿಷಯದಲ್ಲಿ ಕಟ್ಟು ಕತೆ ಕಟ್ಟುತ್ತಿದ್ದು, ಆತನನ್ನು ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.
ವಿಚಾರಣೆಗೆ ಇನ್ನಷ್ಟೇ ಬರಬೇಕಿರುವ ತಮ್ಮ ಅರ್ಜಿಯಲ್ಲಿ ಆರೋಪಿ ಅನುಜ್ ತಪನ್ ತಾಯಿ ರೀಟಾ ದೇವಿ, ತಮ್ಮ ಪುತ್ರನ ಸಾವಿನ ಕುರಿತು ಕೇಂದ್ರೀಯ ತನಿಖಾ ದಳ(ಸಿಬಿಐ)ದಿಂದ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಅನುಜ್ ತಪನ್ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದ್ದು, ಕಸ್ಟಡಿಯಲ್ಲಿದ್ದ ಆತನಿಗೆ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅನುಜ್ ತಪನ್ ರನ್ನು ಬಂಧಿಸಿಡಲಾಗಿದ್ದ ಪೊಲೀಸ್ ಠಾಣೆ ಹಾಗೂ ಅದರ ಲಾಕಪ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದೂ ಹೈಕೋರ್ಟ್ ಗೆ ಮನವಿ ಮಾಡಲಾಗಿದೆ.
ಎಪ್ರಿಲ್ 24ರಿಂದ ಮೇ 2ರವರೆಗೆ ಗುಂಡಿನ ದಾಳಿ ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಕರೆ ದತ್ತಾಂಶ ದಾಖಲೆಗಳನ್ನು ಸಂರಕ್ಷಿಸಿಡಬೇಕು ಎಂದೂ ಅರ್ಜಿದಾರರು ಮನವಿ ಮಾಡಿದ್ದಾರೆ.
ತನುಜ್ ತಪನ್ ಮರಣದ ಕುರಿತು ಹೊಸದಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದಿದ್ದ ಗುಂಡಿನ ದಾಳಿ ಘಟನೆಯ ಸಂಬಂಧ ತಪನ್, ಸೋನು ಬಿಷ್ಣೋಯಿ, ಗುಂಡಿನ ದಾಳಿ ಆರೋಪಿಗಳಾದ ಸಾಗರ್ ಪಾಲ್ ಹಾಗೂ ವಿಕ್ಕಿ ಗುಪ್ತಾರನ್ನು ಬಂಧಿಸಲಾಗಿತ್ತು. ಪೊಲೀಸರ ಪ್ರಕಾರ, ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಹಾಗೂ ಆತನ ಸಹೋದರ ಅನ್ಮೋಲ್ ಬಿಷ್ಣೋಯಿ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಗುಂಡಿನ ದಾಳಿ ಘಟನೆಗೆ ಶಸ್ತ್ರಾಸ್ತ್ರಗಳು ಹಾಗೂ ಗುಂಡುಗಳನ್ನು ಪೂರೈಸಿದ ಆರೋಪದಲ್ಲಿ ಎಪ್ರಿಲ್ 26ರಂದು ಸೋನು ಬಿಷ್ಣೋಯಿಯೊಂದಿಗೆ ತಪನ್ ನನ್ನು ಪಂಜಾಬ್ ನಿಂದ ಪೊಲೀಸರು ಬಂಧಿಸಿದ್ದರು. ಅವರಿಬ್ಬರನ್ನೂ ಎಪ್ರಿಲ್ 30ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿತ್ತು. ಈ ನಡುವೆ, ಈ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಮೋಕಾ ಕಾಯ್ದೆಯನ್ನು ಹೇರಿದ್ದರು.
ತಪನ್ ಸೇರಿದಂತೆ ಎಲ್ಲ ನಾಲ್ವರು ಆರೋಪಿಗಳನ್ನು ಪೊಲೀಸರು ಎಪ್ರಿಲ್ 29ರಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆ ಎಲ್ಲ ಆರೋಪಿಗಳನ್ನು ಮೇ 8ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿತ್ತು.
ಮೇ 1ರಂದು ಕ್ರಾಫೋರ್ಡ್ ಮಾರುಕಟ್ಟೆಯಲ್ಲಿರುವ ಕಮಿಷನರೇಟ್ ಸಂಕೀರ್ಣದ ಅಪರಾಧ ವಿಭಾಗದ ಲಾಕಪ್ ನ ಶೌಚಾಲಯದಲ್ಲಿ ತಪನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ಇದಕ್ಕೂ ಮುನ್ನ, ಎಪ್ರಿಲ್ 4ರಂದು ಬೈಕ್ ಮೇಲೆ ಬಂದಿದ್ದ ವ್ಯಕ್ತಿಗಳು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ್ದರು.
ಈ ಸಂಬಂಧ ಗುಪ್ತಾ ಹಾಗೂ ಪಾಲ್ ಎಂಬ ಆರೋಪಿಗಳನ್ನು ಗುಜರಾತ್ ನಲ್ಲಿ ಬಂಧಿಸಲಾಗಿತ್ತು.