ದ್ವೇಷ ಭಾಷಣ ಕಡಿವಾಣಕ್ಕೆ 2018ರ ಮಾರ್ಗಸೂಚಿ ಬಲಪಡಿಸಲು ಕ್ರಮ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ದೇಶದಲ್ಲಿ ಗುಂಪು ಹಿಂಸಾಚಾರ, ದ್ವೇಷಭಾಷಣ ಮತ್ತು ಗುಂಪು ಹತ್ಯೆ ಪ್ರಕರಣಗಳನ್ನು ತಡೆಯುವ ಸಲುವಾಗಿ 2018ರ ಮಾರ್ಗಸೂಚಿಯನ್ನು ಮತ್ತಷ್ಟು ಬಲಪಡಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಪ್ರಕಟಿಸಿದೆ. ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ಅವರ ಮತಾಂಧತೆ ಹರಡುವ ಪ್ರಯತ್ನವನ್ನು ವಿಫಲಗೊಳಿಸಿ ಎಲ್ಲ ತಪ್ಪಿತಸ್ಥರನ್ನು ಸಮಾನವಾಗಿ ಪರಿಗಣಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಹೋರಾಟಗಾರ ತೆಹ್ಸೀನ್ ಪೂನಾವಾಲಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2018ರ ಜುಲೈ 7ರಂದು ದ್ವೇಷ ಅಪರಾಧಗಳನ್ನು ತಡೆಯುವ ಸಲುವಾಗಿ ಹಲವು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತ್ತು ಹಾಗೂ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇಂಥ ಚಟುವಟಿಕೆಯನ್ನು ತಡೆಯಲು ಅಗತ್ಯ ತಡೆಯಾತ್ಮಕ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಜತೆಗೆ ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳ ನೇಮಕಕ್ಕೂ ಆದೇಶ ನೀಡಿತ್ತು.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2018ರ ತೀರ್ಪನ್ನು ಹೇಗೆ ಅನುಸರಣೆ ಮಾಡುತ್ತಿವೆ ಎನ್ನುವುದನ್ನು ಪರಿಶೀಲಿಸಿ ಕೇಂದ್ರ ಸರ್ಕಾರ ಮೂರು ವಾರಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ದೇಶದ ಅತ್ಯುನ್ನತ ಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ.
ಈ ಮಾಹಿತಿ ಲಭ್ಯವಾಗದೇ ಇದ್ದಲ್ಲಿ ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕದಂದು ಈ ಬಗ್ಗೆ ಮಾಹಿತಿ ನೀಡುವಂತೆಯೂ ನಿರ್ದೇಶನ ನೀಡಿದೆ. 2018ರ ತೀರ್ಪಿನ ಅನುಸಾರ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿರುವ ಸಂಬಂಧ ಸ್ಥಿತಿಗತಿ ವರದಿ ಸಲ್ಲಿಸುವಂತೆಯೂ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಎಸ್‍ವಿಎನ್ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.