ದುರಂತ ನಡೆದ ಸ್ಥಳಕ್ಕೆ ನಟ ಮೋಹನ್ ಲಾಲ್ ಭೇಟಿ | ಪುನರ್ವಸತಿ ಕಾರ್ಯಗಳಿಗೆ 3 ಕೋಟಿ ರೂ. ನೀಡುವುದಾಗಿ ಘೋಷಣೆ
ಮೋಹನ್ ಲಾಲ್ | PTI
ವಯನಾಡ್: ಪ್ರಾಂತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿರುವ ಜನಪ್ರಿಯ ನಟ ಮೋಹನ್ ಲಾಲ್ ಸೇನಾ ಸಮವಸ್ತ್ರ ಧರಿಸಿ ಶನಿವಾರ ಭೂಕುಸಿತ ಸಂಭವಿಸಿದ ವಯನಾಡ್ಗೆ ತಲುಪಿದ್ದಾರೆ ಹಾಗೂ ದುರಂತ ಸಂಭವಿಸಿದ ಪ್ರದೇಶದಲ್ಲಿ ಪುನರ್ವಸತಿ ಕಾರ್ಯಗಳಿಗೆ 3 ಕೋಟಿ ರೂ. ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಮೇಪ್ಪಾಡಿಯಲ್ಲಿರುವ ಸೇನಾ ಶಿಬಿರಕ್ಕೆ ತಲುಪಿದ ಮೋಹನ್ ಲಾಲ್ ಅಧಿಕಾರಿಗಳೊಂದಿಗೆ ಸಂಕ್ಷಿಪ್ತ ಚರ್ಚೆ ನಡೆಸಿದರು. ಅನಂತರ ಇತರರೊಂದಿಗೆ ಅಲ್ಲಿಂದ ಭೂಕುಸಿತ ಸಂಭವಿಸಿದ ಪ್ರದೇಶಕ್ಕೆ ತೆರಳಿದರು.
ಅವರು ಚೂರ್ಮಲ, ಮುಂಡಕ್ಕೈ, ಪುಂಚಿರಮಟ್ಟಂ ಹಾಗೂ ಇತರ ಪ್ರದೇಶಗಳಿಗೆ ಭೇಟಿ ನೀಡಿದರು. ಘಟನೆಯ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲು ಸೇನೆ ಹಾಗೂ ಸ್ಥಳೀಯರು ಸೇರಿದಂತೆ ಹಲವು ರಕ್ಷಣಾ ಕಾರ್ಯಕರ್ತರೊಂದಿಗೆ ಸಂವಹನ ನಡೆಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಮೋಹನ್ಲಾಲ್, ಪ್ರತ್ಯಕ್ಷವಾಗಿ ನೋಡಿದರೆ ಮಾತ್ರ ಈ ದುರಂತದ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು.
‘‘ರಕ್ಷಣಾ ಕಾರ್ಯಾಚರಣೆಯ ಭಾಗವಾಗಿರುವ ಸೇನಾ ಪಡೆ, ವಾಯು ಪಡೆ, ನೌಕಾ ಪಡೆ, ಎನ್ಡಿಆರ್ಎಫ್, ಅಗ್ನಿ ಶಾಮಕ ಹಾಗೂ ರಕ್ಷಣೆ, ಇತರ ಸಂಘಟನೆಗಳು, ಸ್ಥಳೀಯರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ’’ ಎಂದು ಅವರು ಹೇಳಿದರು.
ತಾನು ಭಾರತೀಯ ಸೇನೆಯ 122 ಇನ್ಫೆಂಟ್ರಿಯ ಭಾಗ. ವಿಪತ್ತು ಸಂಭವಿಸಿದಾಗ ಧಾವಿಸಿದ ಮೊದಲ ತಂಡಗಳಲ್ಲಿ ಇದು ಕೂಡ ಒಂದು. ತಮ್ಮ ತಂದೆ, ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ವಿಶ್ವಶಾಂತಿ ಪ್ರತಿಷ್ಠಾನ ಇಲ್ಲಿನ ಪುನರ್ವಸತಿ ಕಾರ್ಯಗಳಿಗಾಗಿ 3 ಕೋಟಿ ರೂ. ದೇಣಿಗೆ ನೀಡಲು ನಿರ್ಧರಿಸಿದೆ. ಅಗತ್ಯವಿದ್ದರೆ, ಹೆಚ್ಚಿನ ದೇಣಿಗೆ ನೀಡಲಾಗುವುದು ಎಂದು ಮೋಹನ್ ಲಾಲ್ ತಿಳಿಸಿದರು.
ಮೋಹನ್ ಲಾಲ್ ಅವರಿಗೆ ಪ್ರಾಂತೀಯ ಸೇನೆಯಲ್ಲಿ 2009ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲಾಗಿತ್ತು.