ಸಿಬಿಎಫ್ ಸಿ ವಿರುದ್ಧ ನಟ ವಿಶಾಲ ಭ್ರಷ್ಟಾಚಾರ ಆರೋಪ : ಸಿಬಿಐನಿಂದ ಪ್ರಕರಣ ದಾಖಲು
ನಟ ವಿಶಾಲ | Photo: twitter/ani_digital
ಹೊಸದಿಲ್ಲಿ : ನಟ ವಿಶಾಲ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮುಂಬೈನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್ ಸಿ)ನ ಅಪರಿಚಿತ ಅಧಿಕಾರಿಗಳು ಮತ್ತು ಮೂವರು ಖಾಸಗಿ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವ ಸಿಬಿಐ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.
ತನ್ನ ‘ಮಾರ್ಕ್ ಆ್ಯಂಟನಿ’ ಚಿತ್ರದ ಹಿಂದಿ ಆವೃತ್ತಿಯ ಪ್ರದರ್ಶನ ಮತ್ತು ಸೆನ್ಸಾರ್ ಸರ್ಟಿಫಿಕೇಟಿಗಾಗಿ ತಾನು ಮುಂಬೈನಲ್ಲಿ ಸುಮಾರು 6.54 ಲ.ರೂ.ಗಳನ್ನು ನೀಡಬೇಕಾಗಿತ್ತು ಎಂದು ತಮಿಳು ನಟ-ನಿರ್ಮಾಪಕ ವಿಶಾಲ ಇತ್ತೀಚಿಗೆ ಆರೋಪಿಸಿದ್ದರು.
ಎಫ್ಐಆರ್ ನಲ್ಲಿ ಮರ್ಲಿನ್ ಮೆನಗಾ, ಜೀಜಾ ರಾಮದಾಸ್ ಮತ್ತು ರಾಜನ್ ಎಂ.ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಸಿಬಿಐ ಪ್ರಕಾರ, 2023 ಸೆಪ್ಟಂಬರ್ ನಲ್ಲಿ ವಿಶಾಲ್ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟಿನ ವ್ಯವಸ್ಥೆ ಮಾಡಲು ಸಿಬಿಎಫ್ ಸಿ ಮುಂಬೈ ಅಧಿಕಾರಿಗಳ ಪರವಾಗಿ ಏಳು ಲ.ರೂ.ಗಳ ಲಂಚವನ್ನು ಪಡೆಯಲು ಆರೋಪಿಗಳ ಪೈಕಿ ಓರ್ವ ಮಹಿಳೆ ಇತರರೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದಳು. ಚೌಕಾಶಿಯ ಬಳಿಕ ಇಬ್ಬರು ಆರೋಪಿಗಳು ತಮ್ಮ ಬ್ಯಾಂಕ್ ಖಾತೆಗಳ ಮೂಲಕ 6.54 ಲ.ರೂ.ಗಳ ಲಂಚವನ್ನು ಸ್ವೀಕರಿಸಿದ್ದರು.
ಸೆ.26ರಂದು ಅಗತ್ಯ ಸೆನ್ಸಾರ್ ಸರ್ಟಿಫಿಕೇಟ್ ಅನ್ನು ಸಿಬಿಎಫ್ ಸಿ ವಿತರಿಸಿತ್ತು. ಈ ಮೊತ್ತಕ್ಕೆ ಹೆಚ್ಚುವರಿಯಾಗಿ ಆರೋಪಿ ಮಹಿಳೆ ತನ್ನ ವೈಯಕ್ತಿಕ ಶುಲ್ಕವೆಂದು 20,000 ರೂ.ಗಳನ್ನು ಖಾಸಗಿ ಕಂಪನಿಯೊಂದರ ಖಾತೆಯಿಂದ ತನ್ನ ಖಾತೆಯಲ್ಲಿ ಸ್ವೀಕರಿಸಿದ್ದಳು ಎಂದೂ ಆರೋಪಿಸಲಾಗಿದೆ. 6.50 ಲ.ರೂ.ಗಳನ್ನು ಬ್ಯಾಂಕಿನಿಂದ ತಕ್ಷಣ ಹಿಂಪಡೆಯಲಾಗಿತ್ತು ಎಂದು ಸಿಬಿಐ ಗುರುವಾರ ತಿಳಿಸಿದೆ.
ಮುಂಬೈ ಸೇರಿದಂತೆ ಆರೋಪಿಗಳು ಮತ್ತು ಇತರರಿಗೆ ಸೇರಿದ ನಾಲ್ಕು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಅದು ಹೇಳಿದೆ.
ಆರೋಪಗಳನ್ನು ಗಮನಿಸಿದ ಸಿಬಿಎಫ್ ಸಿ ಅಧ್ಯಕ್ಷ ಪ್ರಸೂನ ಜೋಶಿಯವರು, ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ತೊಡೆದುಹಾಕಲು ಸಾಂಸ್ಥಿಕ ಮಟ್ಟದಲ್ಲಿ ಪ್ರಕ್ರಿಯೆಗಳನ್ನು ಇನ್ನಷ್ಟು ಬಲಗೊಳಿಸಲಾಗುವುದು ಎಂದು ಬುಧವಾರ ಹೇಳಿದ್ದರು. ದೂರುದಾರರು ಉಲ್ಲೇಖಿಸಿರುವ ವ್ಯಕ್ತಿಗಳು ಸಿಬಿಎಫ್ ಸಿ ಅಧಿಕಾರಿಗಳಲ್ಲ ,ಅನಧಿಕೃತ ಮಧ್ಯವರ್ತಿಗಳಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದರು.
ತನ್ನ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ತಾನು ಲಂಚವನ್ನು ನೀಡಬೇಕಾಗಿತ್ತು ಎಂದು ವಿಶಾಲ್ ಸೆ.29ರಂದು x ಪೋಸ್ಟ್ ನಲ್ಲಿ ಆರೋಪಿಸಿದ್ದರು.
ಇದನ್ನು ಗಮನಿಸಿದ್ದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿಚಾರಣೆ ನಡೆಸಲು ಹಿರಿಯ ಅಧಿಕಾರಿಯೋರ್ವರನ್ನು ನಿಯೋಜಿಸಿತ್ತು.