ಅದಾನಿ ಗ್ರೂಪ್ ಲಂಚ ಹಗರಣ | ಸರಕಾರಿ ಸ್ವಾಮ್ಯದ ಎಸ್ಇಸಿಐ ಕೇಂದ್ರಬಿಂದು
ಗೌತಮ್ ಅದಾನಿ | PC : PTI
ಹೊಸದಿಲ್ಲಿ : ಅಮೆರಿಕದಲ್ಲಿ ಸದ್ದು ಮಾಡುತ್ತಿರುವ ಅದಾನಿ ಗ್ರೂಪ್ ಲಂಚ ಹಗರಣದಲ್ಲಿ ಕೇಂದ್ರಬಿಂದುವಾಗಿರುವ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಇಸಿಐ) ಕೇಂದ್ರ ಸರಕಾರದ ಸಾರ್ವಜನಿಕ ವಲಯದ ಉದ್ಯಮ(ಪಿಎಸ್ಯು) ಆಗಿದ್ದು,ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಅಭಿವೃದ್ಧಿ ಮತ್ತು ವಿಸ್ತರಣೆಯ ಹೊಣೆಗಾರಿಕೆಯನ್ನು ಹೊಂದಿದೆ. ಕಂಪನಿಯ ವೆಬ್ಸೈಟ್ ಪ್ರಕಾರ ಎಸ್ಇಸಿಐ ಭಾರತದ ನವೀಕರಿಸಬಹುದಾದ ಇಂಧನ ಅನುಷ್ಠಾನ ಏಜೆನ್ಸಿಗಳಲ್ಲಿ ಒಂದಾಗಿದೆ.
ಅದಾನಿ ಗ್ರೀನ್ ಎನರ್ಜಿ ಎಸ್ಇಸಿಐ ಜೊತೆ ವಿದುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು ಎನ್ನುವುದನ್ನು ಅಮೆರಿಕದ ಜಿಲ್ಲಾ ನ್ಯಾಯಾಲಯವು ಕಂಡುಕೊಂಡಿದೆ. ಒಪ್ಪಂದದಡಿ ಅದಾನಿ ಎನರ್ಜಿ ಎಸ್ಇಸಿಐಗೆ 12 ಗಿಗಾವ್ಯಾಟ್ ವಿದ್ಯುತ್ನ್ನು ಪೂರೈಸಬೇಕಿತ್ತು ಮತ್ತು ಎಸ್ಇಸಿಐ ಈ ವಿದ್ಯುತ್ ಖರೀದಿಸುವ ಭಾರತೀಯ ಡಿಸ್ಕಾಮ್(ವಿದ್ಯುತ್ ವಿತರಣೆ ಸಂಸ್ಥೆಗಳು) ಗಳನ್ನು ಹುಡುಕಬೇಕಿತ್ತು.
ಅದಾನಿ ಗ್ರೂಪ್ ಪೂರೈಸುವ ವಿದ್ಯುತ್ತಿಗೆ ಖರೀದಿದಾರರನ್ನು ಹುಡುಕುವಲ್ಲಿ ಎಸ್ಇಸಿಐ ವಿಫಲಗೊಂಡ ಬಳಿಕ ಗೌತಮ ಅದಾನಿ ಮತ್ತು ಅವರ ಕಂಪನಿಯ ಅಧಿಕಾರಿಗಳು ರಾಜ್ಯ ಡಿಸ್ಕಾಮ್ಗಳ ಅಧಿಕಾರಿಗಳನ್ನು ವೈಯಕ್ತಿಕವಾಗಿ ಸಂಪರ್ಕಿಸಿದ್ದರು ಮತ್ತು ಎಸ್ಇಸಿಐನಿಂದ ವಿದ್ಯುತ್ ಖರೀದಿಗೆ ಅವರ ಮನವೊಲಿಸಲು 2,000 ಕೋಟಿ ರೂ.ಗೂ ಹೆಚ್ಚಿನ ಲಂಚದ ಆಮಿಷವೊಡ್ಡಿದ್ದರು ಎಂದು ಆರೋಪಿಸಲಾಗಿದೆ.
ನಿರ್ದಿಷ್ಟ ಪ್ರಕರಣವೊಂದರಲ್ಲಿ ಅದಾನಿ ಗ್ರೂಪ್ ಅಧಿಕಾರಿಗಳು ಆಂಧ್ರಪ್ರದೇಶ ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳಿಗೆ 1,750 ಕೋಟಿ ರೂ.ಗಳ ಲಂಚವನ್ನು ನೀಡಿದ್ದಾರೆನ್ನಲಾಗಿದೆ.
ಎಸ್ಇಸಿಐ ಅನ್ನು 2011ರಲ್ಲಿ ಲಾಭೋದ್ದೇಶವಿಲ್ಲದ ಕಂಪನಿಯನ್ನಾಗಿ ಸ್ಥಾಪಿಸಲಾಗಿತ್ತು ಮತ್ತು 2015ರಲ್ಲಿ ವಾಣಿಜ್ಯ ಕಂಪನಿಯನ್ನಾಗಿ ಪರಿವರ್ತಿಸಲಾಗಿತ್ತು. ಕಂಪನಿಯು ಬಹುತೇಕ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಪಸ್ಥಿತಿಯನ್ನು ಹೊಂದಿದ್ದು, ಯಾವಾಗಲೂ ತನ್ನ ಪಾವತಿ ಬದ್ಧತೆಗಳಿಗೆ ತಪ್ಪಿಲ್ಲ.
ಎಸ್ಇಸಿಐ ಸೌರ, ಪವನ ಮತ್ತು ಹೈಬ್ರಿಡ್ ವಿದ್ಯುತ್ ಯೋಜನೆಗಳ ಅಭಿವೃದ್ಧಿಗಾಗಿ ಅನುಷ್ಠಾನ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಎಸ್ಇಸಿಐ ದೇಶಾದ್ಯಂತ ಅಥವಾ ರಾಜ್ಯ ನಿರ್ದಿಷ್ಟ ಆಧಾರದಲ್ಲಿ ಯೋಜನೆಗಳ ಸ್ಥಾಪನೆಗಾಗಿ ನವೀಕರಿಸಬಹುದಾದ ಇಂಧನ ಉತ್ಪಾದಕರ ಆಯ್ಕೆಯಾಗಿ ಟೆಂಡರ್ಗಳನ್ನು ಕರೆಯುತ್ತದೆ ಮತ್ತು ಸ್ಪರ್ಧಾತ್ಮಕ ಇ-ಬಿಡ್ಡಿಂಗ್ ಕಾರ್ಯವಿಧಾನದ ಮೂಲಕ ಯಶಸ್ವಿ ಬಿಡ್ದಾರರನ್ನು ಆಯ್ಕೆ ಮಾಡಲಾಗುತ್ತದೆ.
ಬಿಡ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಸ್ಇಸಿಐ ಆಯ್ಕೆಯಾದ ಬಿಡ್ಡರ್ಗಳಿಂದ 25 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಳ್ಳುತ್ತದೆ ಮತ್ತು ಈ ವಿದ್ಯುತ್ತಿನ ಮಾರಾಟಕ್ಕಾಗಿ ಡಿಸ್ಕಾಮ್ಗಳು/ಖರೀದಿ ಸಂಸ್ಥೆಗಳೊಂದಿಗೆ 25 ವರ್ಷಗಳ ವಿದ್ಯುತ್ ಮಾರಾಟ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ.
ವಿತ್ತವರ್ಷ 2024ರಲ್ಲಿ ಎಸ್ಇಸಿಐ 12,414 ಕೋಟಿ ರೂ. ಮೌಲ್ಯದ ವಿದ್ಯುತ್ ಖರೀದಿಸಿತ್ತು ಮತ್ತು 460 ಕೋಟಿ ರೂ.ಗಳ ಲಾಭವನ್ನು ಗಳಿಸಿತ್ತು.