ಪೆನ್ನಾ ಸಿಮೆಂಟ್ ಖರೀದಿಸಿದ ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್
PC: X
ಹೊಸದಿಲ್ಲಿ: ಪೆನ್ನಾ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ (ಪಿಸಿಐಎಲ್) ಸಂಸ್ಥೆಯನ್ನು 10,422 ಕೋಟಿ ರೂಪಾಯಿಗೆ ಖರೀದಿಸುವುದಾಗಿ ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್ ಗುರುವಾರ ಪ್ರಕಟಿಸಿದೆ. ಈ ಸಂಬಂಧ ಎರಡೂ ಸಂಸ್ಥೆಗಳು ಬದ್ಧತೆ ಒಪ್ಪಂದ ಮಾಡಿಕೊಂಡಿದ್ದು, ಇದರೊಂದಿಗೆ ಅದಾನಿ ಸಮೂಹದ ಸಿಮೆಂಟ್ ಉತ್ಪಾದನಾ ಸಾಮರ್ಥ್ಯ ವಾರ್ಷಿಕ 14 ದಶಲಕ್ಷ ಟನ್ ಗಳಷ್ಟು ಹೆಚ್ಚಿ ಒಟ್ಟು 89 ದಶಲಕ್ಷ ಟನ್ ಗೆ ಏರಿದೆ.
ಈ ಒಪ್ಪಂದದಡಿ ಅಂಬುಜಾ ಸಿಮೆಂಟ್ಸ್ ಪಿಸಿಐಎಲ್ ನ ಪ್ರವರ್ತಕ ಸಮೂವಾದ ಪಿ.ಪ್ರತಾಪ್ ರೆಡ್ಡಿ ಮತ್ತು ಕುಟುಂಬದಿಂದ ಶೇಕಡ 100ರಷ್ಟು ಷೇರುಗಳನ್ನು ಖರೀದಿಸಲಿದೆ. ಪಿಸಿಐಎಲ್ ಪ್ರಸ್ತುತ 14 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಆಂಧ್ರಪ್ರದೇಶ, ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿರುವ ಘಟಕದ ಮೂಲಕ ಕಾರ್ಯನಿರ್ವಹಿಸುತ್ತಿದೆ.
ಇದರ ಜತೆಗೆ ಪಿಸಿಐಎಲ್ ಹೆಚ್ಚುವರಿ ಕ್ಲಿಂಕರ್ಗಳನ್ನು ಜೋಧಪುರ ಘಟಕದಲ್ಲಿ ಸಂಸ್ಕರಿಸುತ್ತದೆ ಹಾಗೂ ಇದು 3 ದಶಲಕ್ಷ ಟನ್ ಹೆಚ್ಚುವರಿ ಗ್ರಿಂಡಿಂಗ್ ಸಾಮಥ್ರ್ಯಕ್ಕೆ ನೆರವು ನೀಡಲಿದೆ.
ಪಿಸಿಐಲ್ ಕೊಲ್ಕತ್ತಾ, ಗೋಪಾಲಪುರ, ಕರೈಕಲ್, ಕೊಚ್ಚಿ ಮತ್ತು ಕೊಲಂಬೊದಲ್ಲಿ ಬೃಹತ್ ಪ್ರಮಾಣದ ಐದು ಸಿಮೆಂಟ್ ಟರ್ಮಿನಲ್ಗಲನ್ನು ಹೊಂದಿದ್ದು, ಈ ಖರೀದಿಯಿಂದ ಅದಾನಿ ಸಮೂಹದ ಸಾಗರ ಸಾರಿಗೆ ಲಾಜಿಸ್ಟಿಕ್ಸ್ ಮತ್ತಷ್ಟು ಉತ್ತೇಜನ ಪಡೆಯುವ ನಿರೀಕ್ಷೆ ಇದೆ.
ಈ ಕಾರ್ಯತಂತ್ರದ ನಡೆಯು ಅದಾನಿ ಸಮೂಹದ ಸಿಮೆಂಟ್ನ ಮಾರುಕಟ್ಟೆ ಪಾಲನ್ನು ದೇಶಾದ್ಯಂತ ಶೇಕಡ 2ರಷ್ಟು ಮತ್ತು ದಕ್ಷಿಣ ಭಾರತದಲ್ಲಿ ಶೇಕಡ 8ರಷ್ಟು ಹೆಚ್ಚಿಸಲಿದೆ.