ಅದಾನಿ ಸಂಸ್ಥೆ ವಿರುದ್ಧದ ಆರೋಪಗಳ ವಿಚಾರಣೆ ಮುಂದೂಡಲಾಗುತ್ತಿರುವ ಬಗ್ಗೆ ಪರಿಶೀಲಿಸಲು ರಿಜಿಸ್ಟ್ರಿಗೆ ಹೇಳುವುದಾಗಿ ತಿಳಿಸಿದ ಸಿಜೆಐ
ಗೌತಮ್ ಅದಾನಿ (PTI)
ಹೊಸದಿಲ್ಲಿ: ಅದಾನಿ ಸಂಸ್ಥೆಯಿಂದ ಸ್ಟಾಕ್ ಮಾರ್ಕೆಟ್ ತಿರುಚುವಿಕೆ ಕುರಿತ ಆರೋಪಗಳಿಗೆ ಸಂಬಂಧಿಸಿದ ದೂರುಗಳ ವಿಚಾರಣೆಯನ್ನು ಸತತ ಮುಂದೂಡಲಾಗುತ್ತಿರುವ ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಹೇಳುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆ ಮೂಲತಃ ಆಗಸ್ಟ್ 28ಕ್ಕೆ ನಿಗದಿಯಾಗಿದ್ದರೂ ಮುಂದೂಡಲಾಗಿದೆ.
ವಿಚಾರಣೆಯನ್ನು ನಿರಂತರ ಮುಂದೂಡಲಾಗುತ್ತಿರುವ ಕುರಿತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೋಮವಾರದ ಕಲಾಪ ಆರಂಭಕ್ಕಿಂತ ಮುಂಚೆ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದಾಗ ಮೇಲಿನ ಭರವಸೆಯನ್ನು ಅವರಿಗೆ ನೀಡಲಾಗಿದೆ.
ಅದಾನಿ ಸಂಸ್ಥೆ ಸ್ಟಾಕ್ ಮಾರ್ಕೆಟ್ ತಿರುಚುವಿಕೆಯನ್ನು ಮಾಡಿದೆ ಎಂಬ ಆರೋಪಗಳ ಕುರಿತಾದ 24 ಅಂಶಗಳ ಪೈಕಿ 22 ಅಂಶಗಳ ತನಿಖೆ ಪೂರ್ಣಗೊಳಿಸಿರುವುದಾಗಿ ಸೆಬಿ ಆಗಸ್ಟ್ 25ರಂದು ಸಲ್ಲಿಸಿದ್ದ ನವೀಕೃತ ಸ್ಥಿತಿಗತಿ ವರದಿಯಲ್ಲಿ ತಿಳಿಸಿತ್ತು.
ಹಿಂಡೆನ್ಬರ್ಗ್ ಆರೋಪಗಳ ನಂತರ 24 ವಿಚಾರಗಳ ಕುರಿತು ತನಿಖೆ ನಡೆಸುವಂತೆ ಸೆಬಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.