ಸೆಬಿ ಮುಖ್ಯಸ್ಥೆ ವಿರುದ್ಧ ಆರೋಪ ಹೊತ್ತ ಹಿಂಡೆನ್ಬರ್ಗ್ ವರದಿ ಬೆನ್ನಲ್ಲೇ ಅದಾನಿ ಸಂಸ್ಥೆಗಳ ಷೇರುಗಳ ಮೌಲ್ಯ ಶೇ. 7ರಷ್ಟು ಕುಸಿತ
ರೂ. 53,000 ಕೋಟಿ ನಷ್ಟ ಅನುಭವಿಸಿದ ಹೂಡಿಕೆದಾರರು!
Photo: PTI
ಹೊಸದಿಲ್ಲಿ: ಅದಾನಿ ಸಂಸ್ಥೆ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಹಿಂಡೆನ್ಬರ್ಗ್ ಸಂಸ್ಥೆ ಸೆಬಿ ಮುಖ್ಯಸ್ಥೆಯ ವಿರುದ್ಧ ತನ್ನ ರವಿವಾರದ ವರದಿಯಲ್ಲಿ ಗಂಭೀರ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಅನೇಕ ಹೂಡಿಕೆದಾರರು ಇಂದು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದು ಅದಾನಿ ಸಮೂಹ ಸಂಸ್ಥೆಗಳ ಷೇರುಗಳ ಮೌಲ್ಯ ಇಂದು ಬೆಳಗ್ಗಿನ ಟ್ರೇಡಿಂಗ್ನಲ್ಲಿ ಶೇ7ರಷ್ಟು ಕುಸಿತ ಕಂಡಿದೆ. ಈ ಬೆಳವಣಿಗೆಯಲ್ಲಿ ಹೂಡಿಕೆದಾರರು ಒಟ್ಟು ರೂ 53,000 ಕೋಟಿ ನಷ್ಟ ಅನುಭವಿಸಿದೆ. ಹತ್ತು ಅದಾನಿ ಸ್ಟಾಕ್ಗಳ ಸಂಯೋಜಿತ ಬಂಡವಾಳೀಕರಣವು ರೂ. 16.7 ಲಕ್ಷ ಕೋಟಿಯಷ್ಟು ಕುಸಿತ ಕಂಡಿವೆ.
ಅದಾನಿ ಗ್ರೀನ್ ಎನರ್ಜಿ ಷೇರುಗಳು ಗರಿಷ್ಠ ಶೇ7ರಷ್ಟು ಕುಸಿತವಾಗಿದ್ದು ಅದರ ಮೌಲ್ಯ ಇಂದು ಬಿಎಸ್ಇ ನಲ್ಲಿ ರೂ. 1,656 ಆಗಿದೆ.
ಅದಾನಿ ಟೋಟಲ್ ಗ್ಯಾಸ್ ಷೇರುಗಳ ಮೌಲ್ಯ ಶೇ5ರಷ್ಟು, ಅದಾನಿ ಪವರ್ ಶೇ4ರಷ್ಟು, ಅದಾನಿ ವಿಲ್ಮಾರ್, ಅದಾನಿ ಎನರ್ಜಿ ಸೊಲ್ಯೂಶನ್ಸ್ ಮತ್ತು ಅದಾನಿ ಎಂಟರ್ಪ್ರೈಸಸ್ ಷೇರು ಮೌಲ್ಯಗಳು ಶೇ3ರಷ್ಟು ಕುಸಿತ ಕಂಡಿವೆ.
ಅದಾನಿ ಪೋರ್ಟ್ಸ್ನ ನಿಫ್ಟಿ ಸ್ಟಾಕ್ ಮೌಲ್ಯ ಶೇ2ರಷ್ಟು ಕುಸಿತ ಕಂಡಿದೆ.
ಹಿಂಡನ್ಬರ್ಗ್ನ ಹೊಸ ವರದಿಯು ಅದಾನಿ ಸಮೂಹದ ವಿರುದ್ಧ ಹೊಸ ಆರೋಪಗಳನ್ನು ಮಾಡಿಲ್ಲದೇ ಇದ್ದರೂ ಸೆಬಿ ಮುಖ್ಯಸ್ಥೆ ಮಾಧಬಿ ಬುಚ್ ಮತ್ತಾಕೆಯ ಪತಿ ಧವಳ್ ಬುಚ್ ಅವರು ಗೌತಮ್ ಅದಾನಿಯ ಸೋದರ ವಿನೋದ್ ಅದಾನಿ ಅದಾನಿ ಸಮೂಹದ ಷೇರುಗಳಲ್ಲಿ ಟ್ರೇಡ್ ಮಾಡಲು ಬಳಸುತ್ತಿದ್ದಾರೆಂದು ಆರೋಪಿಸಲಾದ ಬರ್ಮುಡಾ ಮತ್ತು ಮಾರಿಷಸ್ ,ಮೂಲದ ಆಫ್ಶೋರ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದರೆಂದು ಆರೋಪಿಸಿದೆ.