ಹೈಕಮಾಂಡ್ ನಿಲುವು ಧಿಕ್ಕರಿಸಿದ ಅಧೀರ್ ರಂಜನ್; ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ಮುಂದುರಿಸಿರುವ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ
ಅಧೀರ್ ರಂಜನ್ ಚೌಧರಿ (PTI)
ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ಮುಂದುರಿಸಿರುವ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, "ರಾಜಕೀಯವಾಗಿ ನನ್ನನ್ನು ಮತ್ತು ನಮ್ಮ ಪಕ್ಷವನ್ನು ಸರ್ವನಾಶ ಮಾಡಲು ಹೊರಟಿರುವ ವ್ಯಕ್ತಿಯ ಪರವಾಗಿ ನಾನು ಮಾತನಾಡಲು ಸಾಧ್ಯವಿಲ್ಲ" ಎಂದು ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಚೌಧರಿ ವಿರುದ್ಧ ಚಾಟಿ ಬೀಸಿ, "ಮಮತಾ ಬ್ಯಾನರ್ಜಿ ಇಂಡಿಯಾ ಮೈತ್ರಿಕೂಟದ ಸದಸ್ಯರಾಗಿರಬೇಕೇ ಎಂಬ ನಿರ್ಧಾರ ಕೈಗೊಳ್ಳಲು ಅವರು ಯಾರೂ ಅಲ್ಲ" ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಚೌಧರಿ ಈ ನಿಲವನ್ನು ಧಿಕ್ಕರಿಸಿದ್ದಾರೆ.
"ರಾಜಕೀಯವಾಗಿ ನನ್ನನ್ನು ಮತ್ತು ಬಂಗಾಳದಲ್ಲಿ ನಮ್ಮ ಪಕ್ಷವನ್ನು ಮುಗಿಸಲು ಹೊರಟ ವ್ಯಕ್ತಿಯ ಪರವಾಗಿ ನಾನು ಮಾತನಾಡಲು ಸಾಧ್ಯವಿಲ್ಲ. ಇದು ಪ್ರತಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಮರ. ಅವರ ಪರವಾಗಿ ನಾನು ಮಾತನಾಡಿದ್ದೇನೆ" ಎಂದು ಬೆಹ್ರ್ರಾಂಪುರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಚೌಧರಿ ಸ್ಪಷ್ಟಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ನ ಯೂಸುಫ್ ಪಠಾಣ್ ಅವರನ್ನು ಚೌಧರಿ ಈ ಕ್ಷೇತ್ರದಲ್ಲಿ ಎದುರಿಸುತ್ತಿದ್ದಾರೆ.
"ಮಮತಾ ಬ್ಯಾನರ್ಜಿ ಅವರನ್ನು ವಿರೋಧಿಸುವ ನನ್ನ ನಿಲುವು ತಾತ್ವಿಕ ನೆಲೆಗಟ್ಟನ್ನು ಆಧರಿಸಿದೆ. ವೈಯಕ್ತಿಕ ದ್ವೇಷ ಇಲ್ಲ. ನಾನು ಪ್ರಶ್ನಿಸುವುದು ಅವರ ರಾಜಕೀಯ ನೈತಿಕತೆಯನ್ನು" ಎಂದು ಚೌಧರಿ ಸ್ಪಷ್ಟಪಡಿಸಿದರು.