ಆದಿತ್ಯ-ಎಲ್1: ಭೂಮಿಯ ಸುತ್ತಲಿನ ಕಕ್ಷೆಗೆ ಸೇರ್ಪಡೆ; ಇನ್ನು ಗುರಿ ತಲುಪಲು 125 ದಿನಗಳ ಪಯಣ
ಆದಿತ್ಯ-ಎಲ್1 | Photo: PTI
ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಸೌರ ವೀಕ್ಷಣಾಲಯ ‘ಆದಿತ್ಯ-ಎಲ್1’ನ್ನು ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟ ದ್ವೀಪದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಲಾಯಿತು. ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ‘ವಿಕ್ರಮ’ ಲ್ಯಾಂಡರನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಎರಡು ವಾರಗಳ ಹಿಂದೆ ಹಗುರವಾಗಿ ಇಳಿಸಿದ ಬಳಿಕ, ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಸಾಧನೆಯ ತುರಾಯಿಗೆ ಇನ್ನೊಂದು ಗರಿಯಾಗಿ ಸೇರ್ಪಡೆಗೊಂಡಿತು.
ಭಾರತದ ಮೊದಲ ಬಾಹ್ಯಾಕಾಶ ಸೌರ ವೀಕ್ಷಣಾಲಯವನ್ನು ಹೊತ್ತ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಎಕ್ಸ್ಎಲ್ ರಾಕೆಟ್ ಬೆಳಗ್ಗೆ 11:50 ಕ್ಕೆ ಆಕಾಶದತ್ತ ಚಿಮ್ಮಿತು.
ಇದಾದ ಸುಮಾರು 63 ನಿಮಿಷಗಳ ಬಳಿಕ, ‘ಆದಿತ್ಯ ಎಲ್-1’ ನೌಕೆಯು ರಾಕೆಟ್ನಿಂದ ಬೇರ್ಪಟ್ಟು ಭೂಮಿಯ ಸುತ್ತಲಿನ ಅಂಡಾಕಾರದ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಗೊಂಡಿತು.
ಇನ್ನು ಆದಿತ್ಯ-ಎಲ್1 ನೌಕೆಯು ಈ ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನತ್ತ ಸಾಗುತ್ತದೆ. ಅಂತಿಮವಾಗಿ ಅದನ್ನು ಸೂರ್ಯ-ಭೂಮಿ ಮಂಡಲದ ‘ಲಗ್ರಾಂಜ್ ಬಿಂದು 1’ (ಎಲ್1)ರ ಸುತ್ತಲಿನ ಕಕ್ಷೆಗೆ ಸೇರಿಸಲಾಗುವುದು. ಈ ‘ಲಗ್ರಾಂಜ್ ಬಿಂದು 1’ ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಆಳ ಬಾಹ್ಯಾಕಾಶದಲ್ಲಿದೆ. ಅಲ್ಲಿಗೆ ತಲುಪಲು ಆದಿತ್ಯ-ಎಲ್1 ನೌಕೆಯು 125 ದಿನಗಳನ್ನು ತೆಗೆದುಕೊಳ್ಳಲಿದೆ.
ಲಗ್ರಾಂಜ್ ಬಿಂದುಗಳೆಂದರೆ ಬಾಹ್ಯಾಕಾಶದಲ್ಲಿರುವ ನಿರ್ದಿಷ್ಟ ಸ್ಥಳಗಳು. ಈ ಸ್ಥಳಗಳನ್ನು ಪತ್ತೆಹಚ್ಚಿದವರು ಗಣಿತಜ್ಞ ಜೋಸೆಫ್- ಲೂಯಿಸ್ ಲಗ್ರಾಂಜ್. ಅಲ್ಲಿಗೆ ಯಾವುದಾದರೂ ವಸ್ತುಗಳನ್ನು ಕಳುಹಿಸಿದರೆ ಅವುಗಳು ಅಲ್ಲೇ ನೆಲೆಗೊಳ್ಳುತ್ತವೆ. ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಶಕ್ತಿಗಳು ಪರಸ್ಪರ ವರ್ತಿಸಿದಾಗ ಕೆಲವು ಸ್ಥಳಗಳಲ್ಲಿ ತಟಸ್ಥ ಪರಿಸ್ಥಿತಿ ನೆಲೆಸುತ್ತದೆ. ಅವುಗಳೇ ಲಗ್ರಾಂಜ್ ಬಿಂದುಗಳು. ಬಾಹ್ಯಾಕಾಶದಲ್ಲಿ ನೆಲೆಸಲು ಬೇಕಾಗುವ ಇಂಧನದ ಬಳಕೆಯನ್ನು ಕಡಿಮೆ ಮಾಡಲು ಈ ಬಿಂದುಗಳನ್ನು ಬಳಸಬಹುದಾಗಿದೆ.
ಲಗ್ರಾಂಜ್ ಬಿಂದುಗಳ ಪೈಕಿ ಎಲ್1 ಬಿಂದು ಸೌರ ವೀಕ್ಷಣೆಗೆ ಅತ್ಯಂತ ಪ್ರಶಸ್ತ ಸ್ಥಳ ಎಂಬುದಾಗಿ ಪರಿಗಣಿಸಲಾಗಿದೆ.
ಸೌರ ಯೋಜನೆಯ ಉದ್ದೇಶಗಳು:
ಆದಿತ್ಯ-ಎಲ್1 ಯೋಜನೆಯ ಪ್ರಧಾನ ಉದ್ದೇಶಗಳೆಂದರೆ: ಕೊರೋನ (ಸೂರ್ಯನ ವಾತಾವರಣದ ಅತ್ಯಂತ ಹೊರಗಿನ ಭಾಗ) ಬಿಸಿಯಾಗುವ ಪ್ರಕ್ರಿಯೆ ಮತ್ತು ಸೌರ ಗಾಳಿಯ ಹೆಚ್ಚಳವನ್ನು ಅರ್ಥಮಾಡಿಕೊಳ್ಳುವುದು; ಕೊರೋನ ಮಾಸ್ ಇಜೆಕ್ಷನ್ (ಸಿಎಮ್ಇ), ಜ್ವಾಲೆಗಳು ಮತ್ತು ಭೂಮಿಯ ಸಮೀಪದ ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳುವುದು; ಸೌರ ವಾತಾವರಣದ ಆಗುಹೋಗುಗಳ ಕುರಿತ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು; ಸೌರ ಗಾಳಿ ವಿತರಣೆಯ ಬಗ್ಗೆ ಆಳವಾದ ಅಧ್ಯಯನ ನಡೆಸುವುದು ಮತ್ತು ಉಷ್ಣತೆ ಎಲ್ಲಾ ದಿಕ್ಕುಗಳಲ್ಲಿ ಯಾಕೆ ಏಕಪ್ರಕಾರವಾಗಿಲ್ಲ ಎನ್ನುವುದನ್ನು ತಿಳಿದುಕೊಳ್ಳುವುದು.
7 ಸಲಕರಣೆಗಳು:
ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ವೀಕ್ಷಣಾಲಯದಲ್ಲಿ ಏಳು ಭಿನ್ನ ಸಲಕರಣೆಗಳಿವೆ. ಅವುಗಳ ಪೈಕಿ ನಾಲ್ಕು ಸಲಕರಣೆಗಳು ಸೂರ್ಯನಿಂದ ಬರುವ ಬೆಳಕಿನ ಮೇಲೆ ನಿಗಾ ಇಟ್ಟರೆ, ಇತರ ಮೂರು ಸಲಕರಣೆಗಳು ಪ್ಲಾಸ್ಮ ಮತ್ತು ಕಾಂತೀಯ ಕ್ಷೇತ್ರಗಳ (ಮ್ಯಾಗ್ನೆಟಿಕ್ ಫೀಲ್ಡ್ಸ್) ಮೂಲ ಭೌತಿಕ ಗುಣಲಕ್ಷಣಗಳನ್ನು ಅಳೆಯುತ್ತವೆ.
ವ್ಯೋಮನೌಕೆಯು ಎಲ್1 ಸುತ್ತಲಿನ ಕಕ್ಷೆಯನ್ನು ಸೇರಿದ ಬಳಿಕ, ಅದರಲ್ಲಿರುವ ಪ್ರಧಾನ ಸಲಕರಣೆ ‘ವಿಸಿಬಲ್ ಎಮಿಶನ್ ಲೈನ್ ಕೊರೋನಗ್ರಾಫ್’ ದಿನಕ್ಕೆ 1,440 ಚಿತ್ರಗಳನ್ನು ಭೂಮಿಗೆ ಕಳುಹಿಸುತ್ತದೆ.
ಆದಿತ್ಯ-ಎಲ್1 ಸೂರ್ಯನ ಮೇಲೆ ಇಳಿಯುತ್ತದೆಯೇ?
ಆದಿತ್ಯ-ಎಲ್1 ವೀಕ್ಷಣಾಲಯವು ಸೂರ್ಯನ ನೆಲದ ಮೇಲೆ ಇಳಿಯುವುದಿಲ್ಲ. ಸೂರ್ಯನ ಸುಡುವ ಉಷ್ಣತೆಯಿಂದಾಗಿ ಇದು ಅಸಂಭವ. ಆದರೆ, ಅದನ್ನು ಸೂರ್ಯ-ಭೂಮಿ ಮಂಡಲದ ಕಕ್ಷೆಯಲ್ಲಿ ಇರಿಸಲಾಗುತ್ತದೆ.
ವೀಕ್ಷಣಾಲಯವು ಅಂತಿಮ ಗುರಿಯನ್ನು ತಲುಪಿದಾಗ ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಸೂರ್ಯನ ದಿಕ್ಕಿನಲ್ಲಿರುತ್ತದೆ. ಸೂರ್ಯ ವೀಕ್ಷಣಾಲಯವು ಸೂರ್ಯನ ಸುತ್ತ ತಿರುಗುತ್ತದೆ. ಅದು ಯಾವುದೇ ಗ್ರಹಣಗಳಿದ್ದರೂ ಸೂರ್ಯನನ್ನು ನಿರಂತರವಾಗಿ ನೋಡುತ್ತಿರುತ್ತದೆ.
ಇದು ಸೌರ ಚಟುವಟಿಕೆಗಳು ಮತ್ತು ಬಾಹ್ಯಾಕಾಶ ಹವಾಮಾನದ ಮೇಲೆ ಅದರ ಪರಿಣಾಮಗಳನ್ನು ಸಕಾಲದಲ್ಲಿ ತಿಳಿಯಲು ನೆರವು ನೀಡುತ್ತದೆ.
ವಿದ್ಯುತ್ ಉತ್ಪಾದನೆ ಆರಂಭಿಸಿದ ವೀಕ್ಷಣಾಲಯ
ಆದಿತ್ಯ-ಎಲ್1 ವ್ಯೋಮನೌಕೆಯ ಸೌರ ಫಲಕಗಳನ್ನು ಕೆಲಸಕ್ಕೆ ನಿಯೋಜಿಸಲಾಗಿದೆ ಮತ್ತು ವ್ಯೋಮನೌಕೆಯು ವಿದ್ಯುತ್ ಉತ್ಪಾದಿಸಲು ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅದರ ಕಕ್ಷೆಯನ್ನು ಏರಿಸುವ ಮೊದಲ ಕಸರತ್ತನ್ನು ರವಿವಾರ ಬೆಳಗ್ಗೆ 11:45ಕ್ಕೆ ನಡೆಸಲಾಗುವುದು.
ಇಸ್ರೊದ ಮುಂದಿನ ಯೋಜನೆ?
ಚಂದ್ರಯಾನ-3 ಮತ್ತು ಆದಿತ್ಯ-ಎಲ್1 ಯೋಜನೆಗಳ ಯಶಸ್ವಿ ಜಾರಿಯ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಖಗೋಳಶಾಸ್ತ್ರದ ವೈಜ್ಞಾನಿಕ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವ ಉದ್ದೇಶದ ಯೋಜನೆಯೊಂದನ್ನು ಸಿದ್ಧಪಡಿಸಿದೆ.
ವಿಪರೀತ ಪರಿಸ್ಥಿತಿಗಳಲ್ಲಿ ಹುಟ್ಟಿಕೊಳ್ಳುವ ಅತ್ಯಂತ ಪ್ರಖರ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಆಯಾಮಗಳ ಅಧ್ಯಯನಕ್ಕಾಗಿ ‘ಎಕ್ಸ್ಪೊಸ್ಯಾಟ್’ (ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಯೋಜನೆಯನ್ನು ಇಸ್ರೋ ಕೈಗೆತ್ತಿಕೊಳ್ಳಲಿದೆ. ಇದು ಬೆಳಕಿನ ಧ್ರುವೀಕರಣ (ಪೋಲಾರಿಮೆಟ್ರಿ)ದ ಅಧ್ಯಯನಕ್ಕಾಗಿನ ಭಾರತದ ಮೊದಲ ಯೋಜನೆಯಾಗಿದೆ.
ಇದಕ್ಕಾಗಿ ಎರಡು ಸಲಕರಣೆಗಳನ್ನು ಹೊತ್ತ ವ್ಯೋಮನೌಕೆಯನ್ನು ಭೂಮಿಯ ಕೆಳ ಕಕ್ಷೆಗೆ ಕಳುಹಿಸಲಾಗುವುದು.