ಮತ ಚಲಾವಣೆ ಅಂಕಿ-ಅಂಶ ಬಿಡುಗಡೆಗೆ ಕೋರಿ ಎಡಿಆರ್ ಅರ್ಜಿ | ಮೇ 17ರಂದು ಸುಪ್ರೀಂ ಕೋರ್ಟ್ ನಿಂದ ವಿಚಾರಣೆ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಲೋಕಸಭಾ ಚುನಾವಣೆಯ ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ಒಳಗೆ ಮತಗಟ್ಟೆವಾರು ಮತ ಚಲಾವಣೆ ಅಂಕಿ-ಅಂಶವನ್ನು ತನ್ನ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸರಕಾರೇತರ ಸಂಸ್ಥೆಯೊಂದು ಸಲ್ಲಿಸಿದ ಅರ್ಜಿಯನ್ನು ಮೇ 17ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸರಕಾರೇತರ ಸಂಸ್ಥೆ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಮನವಿ ಮಾಡಿದ ಬಳಿಕ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಕರ್ ದತ್ತಾ ಅವರನ್ನು ಒಳಗೊಂಡ ಪೀಠ ಹೇಳಿತು.
ಮತದಾನದ ಬಳಿಕ ಎಲ್ಲಾ ಮತಗಟ್ಟೆಗಳ ಫಾರ್ಮ್ 17ಸಿ ಭಾಗ-1ರ ಸ್ಕ್ಯಾನ್ ಮಾಡಲಾದ ಸ್ಪಷ್ಟವಾದ ಪ್ರತಿಯನ್ನು ಕೂಡಲೇ ಅಪ್ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ 2019ರಲ್ಲಿ ಸಲ್ಲಿಸಿದ್ದ ತನ್ನ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಸಂಬಂಧಿಸಿ ಎಡಿಆರ್ ಕಳೆದ ವಾರ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಚುನಾವಣಾ ಭ್ರಷ್ಟಾಚಾರದಿಂದ ಪ್ರಜಾಪ್ರಭುತ್ವ ಪ್ರಕ್ರಿಯೆ ಬುಡಮೇಲಾಗದಂತೆ ಖಾತರಿ ನೀಡಲು ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಎಡಿಆರ್ ಹೇಳಿದೆ.