ಪ್ರಾದೇಶಿಕ ಪಕ್ಷಗಳಿಂದ 200 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರಹ : ಎಡಿಆರ್ ವರದಿ ಬಹಿರಂಗ
ಜೆಎಂಎಂ, ಜೆಜೆಪಿ, ಟಿಡಿಪಿ, ಟಿಎಂಸಿ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಭಾರೀ ಹೆಚ್ಚಳ
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: 2022-23ನೇ ಸಾಲಿನ ವಿತ್ತೀಯ ವರ್ಷದಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳು ಒಟ್ಟು 200 ಕೋಟಿ ರೂ.ಗೂ ಅಧಿಕ ಮೊತ್ತದ ದೇಣಿಗೆಯನ್ನು ಪಡೆದಿವೆ ಎಂದು ಪ್ರಜಾತಾಂತ್ರಿಕ ಸುಧಾರಣೆಗಳ ಸಂಘ (ಎಡಿಆರ್)ವು ನಡೆಸಿದ ವಿಶ್ಲೇಷಣಾ ವರದಿ ಬಹಿರಂಗಪಡಿಸಿದೆ. ಈ ಅವಧಿಯಲ್ಲಿ ಜೆಎಂಎಂ,ಜೆಜೆಪಿ,ಟಿಡಿಪಿ ಹಾಗೂ ಟಿಎಂಸಿ ಪಕ್ಷಗಳ ದೇಣಿಗೆ ಸ್ವೀಕಾರದಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ.
ದೇಣಿಗೆ ಸ್ವೀಕಾರದಲ್ಲಿ ಕೆಲವೇ ಕೆಲವು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯದ ಬಗೆಗೂ ವರದಿಯು ಬೆಳಕು ಚೆಲ್ಲಿದೆ. ಭಾರತೀಯ ಚುನಾವಣಾ ಆಯೋಗಕ್ಕೆ ದೇಣಿಗೆಯ ವಿವರಗಳನ್ನು ಸಲ್ಲಿಸುವಲ್ಲಿ ಗಣನೀಯ ವಿಳಂಬ ಹಾಗೂ ದೇಣಿಗೆದಾರರ ವಿವರಗಳನ್ನು ಬಹಿರಂಗಪಡಿಸುವಲ್ಲಿ ದೀರ್ಘ ಸಮಯದ ಅಂತರವಿರುವ ಬಗೆಗೂ ವರದಿಯು ಬೆಟ್ಟು ಮಾಡಿತೋರಿಸಿದೆ.
ಎಡಿಆರ್ ವಿಶ್ಲೇಷಿಸಿರುವ ಒಟ್ಟು 57 ಪ್ರಾದೇಶಿಕ ಪಕ್ಷಗಳ ಪೈಕಿ 18 ರಾಜಕೀಯ ಪಕ್ಷಗಳು ಮಾತ್ರ ನಿಗದಿತ ಅವಧಿಯೊಳಗೆ ಭಾರತೀಯ ಚುನಾವಣಾ ಆಯೋಗಕ್ಕೆ ತಾವು ಸ್ವೀಕರಿಸಿದ ದೇಣಿಗೆಯ ವರದಿಗಳನ್ನು ಬಹಿರಂಗಪಡಿಸಿವೆ.
2022-23ನೇ ಸಾಲಿನಲ್ಲಿ 28 ಪ್ರಾದೇಶಿಕ ಪಕ್ಷಗಳು ಒಟ್ಟು 2,119 ದೇಣಿಗೆಗಳನ್ನು ಸ್ವೀಕರಿಸಿದ್ದು, ಅವುಗಳ ಮೊತ್ತ 216.775 ಕೋಟಿ ರೂ. ಆಗಿದೆ. 20 ಸಾವಿರ ರೂ.ಗೂ ಅಧಿಕ ದೇಣಿಗೆ ನೀಡುವವರು ತಮ್ಮ ಗುರುತನ್ನು ಬಹಿರಂಗಪಡಿಸುವುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ.
ಇತರ 17 ರಾಜಕೀಯ ಪಕ್ಷಗಳು ದೇಣಿಗೆಯ ವಿವರಗಳನ್ನು ಬಹಿರಂಗಪಡಿಸುವಲ್ಲಿ ವಿಳಂಬಿಸಿದ್ದವು. ಬಿಜು ಜನತಾದಳ (ಬಿಜೆಡಿ) ಹಾಗೂ ಜಮ್ಮುಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ (ಜೆಕೆಎನ್ಸಿ) ತಾವು ದೇಣಿಗೆಯನ್ನೇ ಸ್ವೀಕರಿಸಿಲ್ಲವೆಂದು ಘೋಷಿಸಿವೆ.
ಆಡಳಿತಾರೂಢ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ವೀಕರಿಸಿದ ದೇಣಿಗೆಯಲ್ಲಿ 3,685 ಶೇಕಡ ಹೆಚ್ಚಳವುಂಟಾಗಿದೆ. ಜನನಾಯಕ ಜನತಾ ಪಕ್ಷ (ಜೆಜೆಪಿ) 1,997 ಶೇ. ಹಾಗೂ ಟಿಡಿಪಿ 1,795 ಶೇಕಡ ಏರಿಕೆಯೊಂದಿಗೆ ಆನಂತರದ ಸ್ಥಾನದಲ್ಲಿವೆ.
ಆದಾಗ್ಯೂ ಸಮಾಜವಾದಿ ಪಕ್ಷ (ಎಸ್ಪಿ) ಹಾಗೂ ಶಿರೋಮಣಿ ಅಕಾಲಿದಳ (ಎಸ್ಎಡಿ)ದ ದೇಣಿಗೆ ಸ್ವೀಕೃತಿಯಲ್ಲಿ ಕ್ರಮವಾಗಿ 99.1 ಶೇಕಡ ಹಾಗೂ 89.1 ಶೇಕಡ ಕುಸಿತ ಕಂಡುಬಂದಿದೆ.
ಗರಿಷ್ಠ ದೇಣಿಗೆ ಸ್ವೀಕರಿಸಿದ ರಾಜಕೀಯ ಪಕ್ಷಗಳ ಸಾಲಿನಲ್ಲಿ ಭಾರತ ರಾಷ್ಟ್ರೀಯ ಸಮಿತಿ (ಬಿಆರ್ಎಸ್)ಯು ಕೇವಲ 47 ದೇಣಿಗೆಗಳೊಂದಿಗೆ, 154.03 ಕೋಟಿ ರೂ.ಸಂಗ್ರಹಿಸಿದೆ. ಐದು ದೇಣಿಗೆದಾರರಿಂದ 16 ಕೋಟಿ ರೂ. ಪಡೆದಿರುವ ವೈಎಸ್ಆರ್ ಕಾಂಗ್ರೆಸ್ ಹಾಗೂ 11.92 ಕೋಟಿರೂ. ದೇಣಿಗೆ ಸ್ವೀಕರಿಸಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.
ಒಟ್ಟು ಘೋಷಿತ ದೇಣಿಗೆಗಳ ಪೈಕಿ 90.56 ಶೇಕಡ ಮೊತ್ತವನ್ನು
ಬಿಎಸ್ಆರ್, ವೈಎಸ್ಆರ್ ಕಾಂಗ್ರೆಸ್, ಟಿಡಿಪಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ಸಿಪಿಐ ಪಕ್ಷಗಳೇ ಪಡೆದಿವೆ.
ದೇಣಿಗೆ ಬಹಿರಂಗಪಡಿಸುವಿಕೆಯಲ್ಲಿನ ಪಾರದರ್ಶಕತೆಯೂ ಬಗೆಗೂ ಎಡಿಆರ್ ಕಳವಳ ವ್ಯಕ್ತಪಡಿಸಿದೆ. ಐದು ರಾಜಕೀಯ ಪಕ್ಷಗಳು ಖಾಯಂ ಖಾತೆ ಸಂಖ್ಯೆ (ಪಾನ್)ಯನ್ನು ಒದಗಿಸದೆಯೇ 96.2 ಲಕ್ಷ ರೂ. ದೇಣಿಗೆ ಸ್ವೀಕರಿಸಿರುವುದಾಗಿ ಘೋಷಿಸಿದೆ. ಒಟ್ಟು 3.36 ಕೋಟಿ ರೂ. ಮೊತ್ತದ ದೇಣಿಗೆಯಲ್ಲಿ ಅದನ್ನು ನೀಡಿದವರ ವಿಳಾಸಗಳೇ ನಾಪತ್ತೆಯಾಗಿವೆ. ಇದಕ್ಕಿಂತಲೂ ಹೆಚ್ಚಾಗಿ 165.73 ಕೋಟಿ ರೂ. ಮೊತ್ತದ 204 ದೇಣಿಗೆಗಳು, ವಿವರಗಳ ಕೊರತೆಯನ್ನು ಹೊಂದಿವೆ.