ಮಾವಿನ ಕಾಯಿ ಕಳ್ಳತನ ಪ್ರಕರಣದ ಶತಮಾನದಷ್ಟು ಹಿಂದಿನ ಥಾಣೆ ಕೋರ್ಟ್ ಆದೇಶದ ಪ್ರತಿ ಪತ್ತೆ!
ಸಾಂದರ್ಭಿಕ ಚಿತ್ರ
ಥಾಣೆ (ಮಹಾರಾಷ್ಟ್ರ) : ಮಹಾರಾಷ್ಟ್ರದ ಥಾಣೆಯ ನ್ಯಾಯಾಲಯವೊಂದು ನೂರು ವರ್ಷಗಳ ಹಿಂದೆ ಮಾವಿನ ಕಾಯಿಗಳ ಕಳ್ಳತನ ಪ್ರಕರಣದಲ್ಲಿ ಹೊರಡಿಸಿದ್ದ ಆದೇಶದ ಪ್ರತಿಯನ್ನು ವಕೀಲರೋರ್ವರು ಆಕಸ್ಮಿಕವಾಗಿ ಪತ್ತೆ ಹಚ್ಚಿದ್ದು, 1924 ಜುಲೈ 5ರ ದಿನಾಂಕವನ್ನು ಹೊಂದಿರುವ ಆದೇಶವು ಆಗಿನ ಕಾಲದ ಕಾನೂನು ಪ್ರಕ್ರಿಯೆಗಳ ನೋಟವನ್ನು ಒದಗಿಸಿದೆ.
ಥಾಣೆ ನಗರದಲ್ಲಿನ ಮೊದಲಿನ ಮನೆಯಿಂದ ಸ್ಥಳಾಂತರಗೊಳ್ಳುವಾಗ ಅಟ್ಟದಲ್ಲಿ ಹಲವಾರು ವರ್ಷಗಳಿಂದ ಗಮನಿಸಿರದಿದ್ದ ಚೀಲವೊಂದು ಪತ್ತೆಯಾಗಿತ್ತು. ಬಹುಶಃ ಆ ಮನೆಯಲ್ಲಿ ಹಿಂದೆ ಬಾಡಿಗೆಗಿದ್ದವರು ಅದನ್ನು ಬಿಟ್ಟು ಹೋಗಿದ್ದಿರಬಹುದು. ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ಕೆಲವು ಹಳೆಯ ಆಸ್ತಿ ದಾಖಲೆಗಳು ಮತ್ತು ನ್ಯಾಯಾಧೀಶರ ಆದೇಶದ ಪ್ರತಿ ಕಂಡು ಬಂದಿದ್ದವು ಎಂದು ವಕೀಲ ಪುನೀತ್ ಮಹಿಮಾಕರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆದೇಶವು 185 ಮಾವಿನ ಕಾಯಿಗಳ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದ್ದು, ಎಂಜೆಲೋ ಆಲ್ವಾರಿಸ್ ಮತ್ತು ಇತರ ಮೂವರು ಆರೋಪಿಗಳಾಗಿದ್ದರು.
ಬೋಸ್ತಿಯಾವ್ ಎಲ್ಲಿಸ್ ಆಂಡ್ರಾಡೆನ್ ಎನ್ನುವವರಿಗೆ ಸೇರಿದ ತೋಟದಿಂದ ಮಾವಿನ ಕಾಯಿಗಳನ್ನು ಕಳ್ಳತನ ಮಾಡುತ್ತಿದ್ದಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂಬ ಪ್ರಾಸಿಕ್ಯೂಷನ್ ವಾದವನ್ನು ಆದೇಶವು ಉಲ್ಲೇಖಿಸಿದೆ. ಆರೋಪಿಗಳು ಮಾವಿನ ಕಾಯಿಗಳನ್ನು ಸ್ಥಳೀಯ ವ್ಯಾಪಾರಿಗೆ ಮಾರಾಟ ಮಾಡಿದ್ದನ್ನು ಕಂಡಿದ್ದ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದಾಗ ಆಂಡ್ರಾಡೆನ್ ಕಾನೂನು ಕ್ರಮಕ್ಕೆ ಮುಂದಾಗಿದ್ದರು.
ಆರೋಪಿಗಳು ಅಮಾಯಕರಾಗಿದ್ದಾರೆ ಎಂದು ಅವರ ಪರ ವಕೀಲರು ವಾದಿಸಿದ್ದರು. ಆದರೆ ನ್ಯಾ.ಟಿ.ಎ.ಫರ್ನಾಂಡಿಸ್ ಅವರು ಆರೋಪಿಗಳು ಮಾವಿನ ಕಾಯಿ ಕಳ್ಳತನದ ತಪ್ಪಿತಸ್ಥರಾಗಿದ್ದಾರೆ ಎಂದು ಘೋಷಿಸಿದ್ದರು.
‘ಸಮಗ್ರ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಆರೋಪಿಗಳು ಕಳ್ಳತನದ ಅಪರಾಧವನ್ನು ಮಾಡಿದ್ದಾರೆ ಎನ್ನುವುದು ನನಗೆ ಮನದಟ್ಟಾಗಿದೆ. ಆದರೆ ಅವರೆಲ್ಲ ಯುವಕರಾಗಿದ್ದಾರೆ ಮತ್ತು ಶಿಕ್ಷೆ ವಿಧಿಸುವ ಮೂಲಕ ಅವರ ಜೀವನವನ್ನು ಹಾಳು ಮಾಡಲು ನಾನು ಬಯಸುವುದಿಲ್ಲ. ಅಲ್ಲದೆ ಹಿಂದೆ ಅವರು ಯಾವುದೇ ಅಪರಾಧವನ್ನು ಎಸಗಿಲ್ಲ. ಅದರಂತೆ ಐಪಿಸಿಯ ಕಲಂ 379/109ರಡಿ ಅವರನ್ನು ದೋಷನಿರ್ಣಯಕ್ಕೆ ಒಳಪಡಿಸಿದ್ದೇನೆ ಮತ್ತು ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸುತ್ತಿದ್ದೇನೆ’ ಎಂದು ನ್ಯಾ.ಫರ್ನಾಂಡಿಸ್ ತನ್ನ ಆದೇಶದಲ್ಲಿ ಹೇಳಿದ್ದರು.
ತಾನು ಈ ದಾಖಲೆಯನ್ನು ಸಂರಕ್ಷಿಸಿಡಲು ಯೋಜಿಸಿದ್ದೇನೆ ಎಂದು ಮಹಿಮಾಕರ್ ಹೇಳಿದರು.