ಅಪ್ರಾಪ್ತ ಪುತ್ರಿಯಿಂದಲೇ ಸುಳ್ಳು ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದ ವ್ಯಕ್ತಿ ಐದು ವರ್ಷಗಳ ನಂತರ ಜೈಲಿನಿಂದ ಬಿಡುಗಡೆ!
ತರಗತಿಗೆ ಗೈರಾಗುತ್ತಿದ್ದದ್ದನ್ನು ಆಕ್ಷೇಪಿಸಿದ್ದಕ್ಕೆ ಸುಳ್ಳು ಅತ್ಯಾಚಾರ ಆರೋಪ ಹೊರಿಸಿದ್ದ ಅಪ್ರಾಪ್ತೆ
ಸಾಂದರ್ಭಿಕ ಚಿತ್ರ (Photo credit: Meta AI)
ಡೆಹ್ರಾಡೂನ್: ಡೆಹ್ರಾಡೂನ್ ನ ವಿಶೇಷ ಪೋಕ್ಸೊ ನ್ಯಾಯಾಲಯವು 42 ವರ್ಷದ ವ್ಯಕ್ತಿಯೊಬ್ಬರನ್ನು ಅತ್ಯಾಚಾರ ಆರೋಪದಿಂದ ಖುಲಾಸೆಗೊಳಿಸಿದ್ದು, ಅವರ ವಿರುದ್ಧ ಅವರ 15 ವರ್ಷದ ಅಪ್ರಾಪ್ತ ಪುತ್ರಿಯೇ ಸುಳ್ಳು ಅತ್ಯಾಚಾರ ಆರೋಪ ಹೊರಿಸಿರುವುದು ಬೆಳಕಿಗೆ ಬಂದಿದೆ.
ಜೈಲಿನಲ್ಲಿ 5 ವರ್ಷಗಳನ್ನು ಕಳೆದ ನಂತರ ಅವರ ಬಿಡುಗಡೆಯಾಗಿದ್ದು, ಅವರ ಪುತ್ರಿಯು ತನ್ನ ಗೆಳೆಯನ ಜೊತೆ ಕಾಲ ಕಳೆಯಲು ತರಗತಿಗೆ ಗೈರಾಗುತ್ತಿದ್ದದ್ದನ್ನು ಆಕ್ಷೇಪಿಸುತ್ತಿದ್ದುದರಿಂದ, ಅವರ ವಿರುದ್ಧ ಅತ್ಯಾಚಾರ ಆರೋಪವನ್ನು ಹೊರಿಸಿದ್ದಳು ಎಂದು Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳು ಹಾಗೂ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಆರೋಪಿಯ ವಿರುದ್ಧ ಆತನ ಪುತ್ರಿಯೇ ಸುಳ್ಳು ಅತ್ಯಾಚಾರ ಆರೋಪವನ್ನು ಹೊರಿಸುವಂತೆ ಆಕೆಯ ಗೆಳೆಯ ಆಕೆಯನ್ನು ಪ್ರಚೋದಿಸಿದ್ದ ಎಂಬ ಸಂಗತಿಯು ಬೆಳಕಿಗೆ ಬಂದಿದೆ. ಈ ಸುಳ್ಳು ಆರೋಪಕ್ಕಾಗಿ ಈ ವ್ಯಕ್ತಿಯು 5 ವರ್ಷಗಳ ಕಾಲ ಜೈಲಿನಲ್ಲಿ ಕಳೆಯುಂತಾಗಿದೆ.
ಅಪ್ರಾಪ್ತ ಬಾಲಕಿಯ ಪರವಾಗಿ ಡಿಸೆಂಬರ್ 25, 2019ರಂದು ಮಕ್ಕಳ ಕಲ್ಯಾಣ ಸಮಿತಿಯು ದೂರು ದಾಖಲಿಸಿತ್ತು. “ಬಾಲಕಿಯು ತನ್ನ ತಂದೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು, ಈ ಹೇಳಿಕೆಯನ್ನು ಆಕೆಯ ಕಿರಿಯ ಸಹೋದರಿಯೂ ಸಮರ್ಥಿಸಿದ್ದಾಳೆ” ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಇದಾದ ನಂತರ, ಡಿಸೆಂಬರ್ 27ರಂದು ಬಾಲಕಿಯ ಗೆಳೆಯನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ತನ್ನ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ಮಾಡಲಾಗಿದೆ ಎಂಬ ಬಾಲಕಿಯ ತಂದೆಯ ಹೇಳಿಕೆಯನ್ನು ಆಧರಿಸಿ, ಆ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ಸಂದರ್ಭದಲ್ಲಿ ಆಕೆ ತನಗೆ ಗೆಳಯನೊಂದಿಗೆ ಸಂಬಂಧವಿರುವುದನ್ನು ಒಪ್ಪಿಕೊಂಡಿದ್ದಳು ಎಂದು ಹೇಳಲಾಗಿದೆ.
ಇದರ ಬೆನ್ನಿಗೇ ಅಪ್ರಾಪ್ತ ಬಾಲಕಿಯ ನಿವಾಸವನ್ನು ಶೋಧಿಸಿರುವ ಪೊಲೀಸರು, ಅಲ್ಲಿಂದ ಆಕೆ ತನ್ನ ಗೆಳೆಯನಿಗೆ ಬರೆದಿರುವ ಕೆಲವು ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಆ ಬಾಲಕಿ ಕೂಡಾ ತಮ್ಮಿಬ್ಬರ ಸಂಬಂಧವನ್ನು ಒಪ್ಪದ ತನ್ನ ತಂದೆಯ ಬಗ್ಗೆ ಅಸಮಾಧಾನಗೊಂಡಿದ್ದೆ ಎಂದು ಬಹಿರಂಗಪಡಿಸಿದ್ದಾಳೆ.
ಅಪ್ರಾಪ್ತ ಬಾಲಕಿಯ ಡಿಎನ್ಎ ಪರೀಕ್ಷೆ ನಡೆಸಿದ್ದ ವೈದ್ಯರು, ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ದೃಢಪಡಿಸಲು ಸಾಧ್ಯವಿಲ್ಲ. ಆಕೆಯ ಪರೀಕ್ಷಾ ವರದಿಗಳು ನಕಾರಾತ್ಮಕವಾಗಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಸಾಕ್ಷ್ಯವನ್ನು ಪರಿಗಣಿಸಿದ ನ್ಯಾಯಾಲಯವು, 42 ವರ್ಷದ ಮುಗ್ಧ ತಂದೆಯನ್ನು ಈ ತಿಂಗಳ ಆರಂಭದಲ್ಲಿ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.