ಗೌತಮ್ ಗಂಭೀರ್ ಸಕ್ರಿಯ ರಾಜಕಾರಣದಿಂದ ದೂರವುಳಿಯುವುದಾಗಿ ಹೇಳಿದ ಬೆನ್ನಲ್ಲೇ ಚುನಾವಣೆ ಸ್ಪರ್ಧಿಸುವುದಿಲ್ಲವೆಂದ ಮತ್ತೊಬ್ಬ ಬಿಜೆಪಿ ಸಂಸದ
ಜಯಂತ್ ಸಿನ್ಹಾ (Photo: PTI)
ಹೊಸದಿಲ್ಲಿ: ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ನಿರ್ಧಾರವನ್ನು ಪೂರ್ವ ದಿಲ್ಲಿ ಸಂಸದ ಹಾಗೂ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಕಟಿಸಿದ ಬೆನ್ನಲ್ಲೇ ಇನ್ನೋರ್ವ ಬಿಜೆಪಿ ಸಂಸದ ಜಯಂತ್ ಸಿನ್ಹಾ ಕೂಡ ಚುನಾವಣಾ ರಾಜಕಾರಣದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಪಕ್ಷವನ್ನು ಕೋರಿದ್ದಾರೆ ಹಾಗೂ ಈ ಮೂಲಕ ತಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಲ್ಲ ಹಾಗೂ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಬಯಸುವುದಿಲ್ಲ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ನ ಹಜಾರಿಬಾಗ್ ಕ್ಷೇತ್ರದ ಸಂಸದರಾಗಿರುವ ಜಯಂತ್ ಸಿನ್ಹಾ ತಮ್ಮ ನಿರ್ಧಾರದ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ನೇರ ಚುನಾವಣಾ ಕರ್ತವ್ಯಗಳಿಂದ ನನ್ನನ್ನು ಬಿಡುಗಡೆಗೊಳಿಸಿ ದೇಶ ಮತ್ತು ಜಗತ್ತಿನ ಇತರೆಡೆ ಜಾಗತಿಕ ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ನನ್ನ ಪ್ರಯತ್ನಗಳನ್ನು ಮುಂದುವರಿಸುವಂತಾಗಲು ಅನುವು ಮಾಡಿಕೊಡಿ,” ಎಂದು ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಸಿನ್ಹಾ ಕೋರಿದ್ದಾರೆ. “ಪಕ್ಷದೊಂದಿಗೆ ಆರ್ಥಿಕ ಮತ್ತು ಆಡಳಿತ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲಸ ಮುಂದುವರಿಸುತ್ತೇನೆ,” ಎಂದು ಅವರು ಬರೆದಿದ್ದಾರೆ.
ಗೌತಮ್ ಗಂಭೀರ್ ಹಾಗೂ ಜಯಂತ್ ಸಿನ್ಹಾ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯದೇ ಇರಬಹುದೆಂಬ ವರದಿಗಳ ಹಿನ್ನೆಲೆಯಲ್ಲಿ ಇಬ್ಬರೂ ಸಕ್ರಿಯ ರಾಜಕಾರಣದಿಂದ ದೂರ ಸರಿಯಲು ನಿರ್ಧರಿಸಿದ್ದಾರೆಂದೇ ತಿಳಿಯಲಾಗಿದೆ.