ಹಿಜಾಬ್ ನಂತರ ಜೀನ್ಸ್, ಟೀಶರ್ಟ್ ನಿಷೇಧಿಸಿದ ಮುಂಬೈ ಕಾಲೇಜು
ಸಾಂದರ್ಭಿಕ ಚಿತ್ರ (Credit: news18.com)
ಮುಂಬೈ: ಈ ಹಿಂದೆ ಹಿಜಾಬ್ ನಿಷೇಧಿಸಿದ್ದ ಚೆಂಬೂರಿನ ಆಚಾರ್ಯ ಮತ್ತು ಮರಾಠೆ ಕಾಲೇಜು, ಇದೀಗ ಸೋಮವಾರದಿಂದ ವಿದ್ಯಾರ್ಥಿಗಳು ಜೀನ್ಸ್ ಮತ್ತು ಟೀ ಶರ್ಟ್ ಧರಿಸಿ ಕಾಲೇಜಿನ ಆವರಣ ಪ್ರವೇಶಿಸುವುದನ್ನೂ ನಿಷೇಧಿಸಿದೆ.
ಕಳೆದ ವರ್ಷ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದ ಈ ಕಾಲೇಜು, ವಿದ್ಯಾರ್ಥಿಗಳು ಹಿಜಾಬ್ ಮತ್ತಿತರ ಧಾರ್ಮಿಕ ಗುರುತುಗಳ ವಸ್ತ್ರ ತೊಟ್ಟು ಕಾಲೇಜು ಆವರಣ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಾಲೇಜು ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಬಾಂಬೆ ಹೈಕೋರ್ಟ್ ಇತ್ತೀಚೆಗೆ ವಿದ್ಯಾರ್ಥಿಗಳ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಿಗೇ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿರುವ ಆಚಾರ್ಯ ಮತ್ತು ಮರಾಠೆ ಕಾಲೇಜು ಆಡಳಿತ ಮಂಡಳಿ, ಹಿಜಾಬ್ ನಂತರ ವಿದ್ಯಾರ್ಥಿಗಳು ಜೀನ್ಸ್ ಮತ್ತು ಟೀಶರ್ಟ್ ತೊಟ್ಟು ಕಾಲೇಜು ಆವರಣ ಪ್ರವೇಶಿಸುವುದನ್ನೂ ನಿಷೇಧಿಸಿದೆ.
ಜೂನ್ 27ರಂದು ಹೊರಡಿಸಲಾಗಿರುವ "ವಸ್ತ್ರ ಸಂಹಿತೆ ಮತ್ತು ಇತರ ನಿಯಮಗಳು" ಎಂಬ ಶೀರ್ಷಿಕೆಯ ನೋಟಿಸ್ ಪ್ರಕಾರ, ಹರಿದ ಜೀನ್ಸ್, ಟೀಶರ್ಟ್ಗಳು, ಅಸಭ್ಯ ವಸ್ತ್ರಗಳು ಹಾಗೂ ಜೆರ್ಸಿಗಳನ್ನು ತೊಟ್ಟು ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಪ್ರವೇಶಿಸುವಂತಿಲ್ಲ.
ಈ ನೋಟಿಸ್ಗೆ ಕಾಲೇಜಿನ ಪ್ರಾಂಶುಪಾಲೆಯಾದ ಡಾ. ವಿದ್ಯಾಗೌರಿ ಲೆಲೆ ಸಹಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಔಪಚಾರಿಕ ಮತ್ತು ಸಭ್ಯ ಉಡುಪುಗಳನ್ನು ಧರಿಸಬೇಕು. ಅವರು ಅರ್ಧ ತೋಳಿನ ಟೀಶರ್ಟ್, ಪೂರ್ಣ ತೋಳಿನ ಟೀ ಶರ್ಟ್ ಮತ್ತು ಶರ್ಟ್ ಅನ್ನು ಧರಿಸಬಹುದಾಗಿದೆ. ಯುವತಿಯರು ಯಾವುದೇ ಭಾರತೀಯ ಅಥವಾ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಬಹುದಾಗಿದೆ. ಆದರೆ, ಧಾರ್ಮಿಕ ಅಥವಾ ಸಾಂಸ್ಕೃತಿಕ ಅಸಮಾನತೆಯನ್ನು ಸೂಚಿಸುವ ಯಾವುದೇ ಉಡುಪುಗಳನ್ನು ವಿದ್ಯಾರ್ಥಿಗಳು ಧರಿಸಕೂಡದು. ನಕಾಬ್, ಹಿಜಾಬ್, ಬುರ್ಖಾ, ಕುತ್ತಿಗೆ ವಸ್ತ್ರ, ಟೋಪಿ, ಬ್ಯಾಡ್ಜ್ ಇತ್ಯಾದಿಗಳನ್ನು ತೆಗೆದು, ಕಾಲೇಜಿನ ನೆಲ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ ಇಡಬೇಕು. ನಂತರವಷ್ಟೆ ಕಾಲೇಜಿನ ಆವರಣದ ಸುತ್ತ ತಿರುಗಾಡಲು ಅವಕಾಶ ನೀಡಲಾಗುತ್ತದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
"ಕಳೆದ ವರ್ಷ ಅವರು ಹಿಜಾಬ್ ಅನ್ನು ನಿಷೇಧಿಸಿದರು. ಈ ವರ್ಷ ಅವರು ಜೀನ್ಸ್ ಮತ್ತು ಟೀಶರ್ಟ್ ಅನ್ನು ನಿಷೇಧಿಸಿದ್ದಾರೆ. ಟೀಶರ್ಟ್ ಮತ್ತು ಜೀನ್ಸ್ ಅನ್ನು ಕೇವಲ ಯುವಕರು ಮಾತ್ರ ಧರಿಸುವುದಿಲ್ಲ. ಬದಲಿಗೆ ಎಲ್ಲ ಧರ್ಮ ಮತ್ತು ಲಿಂಗದ ಜನರು ಧರಿಸುತ್ತಾರೆ. ಅವರು ಇಂತಹ ಅಪ್ರಾಯೋಗಿಕ ವಸ್ತ್ರ ಸಂಹಿತೆಗಳನ್ನು ಜಾರಿಗೊಳಿಸಿ ವಿದ್ಯಾರ್ಥಿಗಳ ಮೇಲೆ ಏನು ಹೇರಲು ಬಯಸುತ್ತಿದ್ದಾರೆಂಬುದೇ ಅರ್ಥವಾಗುತ್ತಿಲ್ಲ" ಎಂದು ಗೋವಂಡಿ ಸಿಟಿಝನ್ಸ್ ಅಸೋಸಿಯೇಷನ್ನ ಅತೀಕ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.