ಉತ್ತರ ಪ್ರದೇಶ | ಐಸ್ ಕ್ರೀಂನಲ್ಲಿ ಮನುಷ್ಯನ ಬೆರಳಾಯಿತು, ಈಗ ಚೇಳಿನ ಸರದಿ!
ನೊಯ್ಡಾದ ಮಹಿಳೆಯು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಂನಲ್ಲಿ ಚೇಳು ಪತ್ತೆ : ತನಿಖೆಗೆ ಕ್ರಮ
PC: X \ @Deepadi11
ನೊಯ್ಡಾ (ಉತ್ತರ ಪ್ರದೇಶ): ತ್ವರಿತ ಸರಬರಾಜು ಅಪ್ಲಿಕೇಶನ್ ಮೂಲಕ ಆದೇಶಿಸಿದ್ದ ಐಸ್ ಕ್ರೀಂ ನಲ್ಲಿ ಚೇಳೊಂದು ಪತ್ತೆಯಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ ಎಂದು ತಿಳಿಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು, ಈ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಜೂನ್ 15ರಂದು ದೀಪಾ ದೇವಿ ಎಂಬವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ಜನಪ್ರಿಯ ಬ್ರ್ಯಾಂಡ್ ಒಂದರ ಐಸ್ ಕ್ರೀಂನಲ್ಲಿ ಚೇಳು ಇರುವ ಚಿತ್ರವನ್ನು ಹಂಚಿಕೊಂಡಿದ್ದರು. ಇದರೊಂದಿಗೆ ಈ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.
ಈ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿರುವ ನೊಯ್ಡಾ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು, ತ್ವರಿತ ಸರಬರಾಜು ಕಂಪನಿಯಲ್ಲಿನ ಜನಪ್ರಿಯ ಬ್ರ್ಯಾಂಡ್ ಐಸ್ ಕ್ರೀಂನ ಮಾದರಿಯನ್ನು ಸಂಗ್ರಹಿಸಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಪ್ರಧಾನ ಆಹಾರ ಸುರಕ್ಷತಾ ಅಧಿಕಾರಿ ಅಕ್ಷಯ್ ಗೋಯಲ್, “ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ನಾವು ಈ ಪ್ರಕರಣದಲ್ಲಿ ಆಗಿರುವ ನಿರ್ಲಕ್ಷ್ಯದ ವಿರುದ್ಧ 2006ರ ಆಹಾರ ಸುರಕ್ಷತಾ ಕಾಯ್ದೆಯ ಉಲ್ಲಂಘನೆಯ ಸೆಕ್ಷನ್ ಗಳಡಿ ಮೊಕದ್ದಮೆ ದಾಖಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಹೇಳಿದ್ದಾರೆ.
ಮಹಿಳೆಯ ಸಾಮಾಜಿಕ ಮಾಧ್ಯಿಮದಲ್ಲಿನ ಪೋಸ್ಟ್ ಅನ್ನು ಸ್ವಯಂಪ್ರೇರಿತವಾಗಿ ಗಂಭೀರವಾಗಿ ಪರಿಗಣಿಸಿದ ಆಹಾರ ಸುರಕ್ಷತಾ ಇಲಾಖೆಯು ಆಕೆಯನ್ನು ಸಂಪರ್ಕಿಸಿತು ಎಂದು ತಿಳಿಸಿದ್ದಾರೆ.
"Finding an insect inside my @Amul India ice cream was truly alarming Quality control and food safety should never be compromised@FSSAI Publication have to take some legal action on such kind of incidents they are increasing in numbers day by day pic.twitter.com/K7yxiARwK5
— Deepa Devi (@Deepadi11) June 15, 2024
ಅಧಿಕಾರಿಗಳ ಪ್ರಕಾರ, ಐಸ್ ಕ್ರೀಂ ಅನ್ನು ಪ್ಯಾಕ್ ಮಾಡಿರುವ ದಿನಾಂಕ ಎಪ್ರಿಲ್ 15, 2024 ಹಾಗೂ ಅದರ ಅವಧಿ ಮೀರುವ ದಿನಾಂಕ ಎಪ್ರಿಲ್ 15, 2025 ಎಂದು ಐಸ್ ಕ್ರೀಂ ಬಾಕ್ಸ್ ಮೇಲೆ ಮುದ್ರಿಸಲಾಗಿದೆ ಎಂದು ಹೇಳಲಾಗಿದೆ.