ಎನ್ ಡಿಎ ಸಚಿವ ಸಂಪುಟ | ಎನ್ ಸಿಪಿ ನಂತರ ರಾಜ್ಯ ಸಚಿವ ಸ್ಥಾನದ ಕುರಿತು ಶಿವಸೇನೆಯಲ್ಲಿ ಭುಗಿಲೆದ್ದ ಅಸಮಾಧಾನ
ಸಂಪುಟ ದರ್ಜೆ ಸಚಿವ ಸ್ಥಾನಕ್ಕೆ ಏಕನಾಥ್ ಶಿಂದೆ ಬಣದಿಂದ ಪಟ್ಟು
PC: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ತನಗೆ ಸಂಪುಟ ದರ್ಜೆಯ ಸಚಿವ ಸ್ಥಾನಮಾನ ದೊರೆಯದೆ ಇರುವುದರಿಂದ ಶಿವಸೇನೆ (ಶಿಂಧೆ ಠಾಕ್ರೆ) ಬಣವು ಅಸಮಾಧಾನಗೊಂಡಿದೆ. ತನ್ನ ಸಂಸದನಿಗೆ ರಾಜ್ಯ ದರ್ಜೆಯ ಸಚಿವ ಸ್ಥಾನಮಾನ ನೀಡಿರುವುದರ ವಿರುದ್ಧ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಿಗೇ ಈ ವಿದ್ಯಮಾನ ನಡೆದಿದೆ.
ಎನ್ಡಿಎ ಮೈತ್ರಿಕೂಟದಲ್ಲಿನ ಸಂಪುಟ ಸಚಿವ ಸ್ಥಾನಗಳ ಪ್ರಮಾಣದತ್ತ ಬೊಟ್ಟು ಮಾಡಿರುವ ಶಿಂದೆ ನೇತೃತ್ವದ ಶಿವಸೇನೆಯ ಮುಖ್ಯ ಸಚೇತಕ ಶ್ರೀರಂಗ್ ಬಾರ್ನೆ, “ನಾವು ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಮೈತ್ರಿಕೂಟದಲ್ಲಿ ಚಿರಾಗ್ ಪಾಸ್ವಾನ್ ಐವರು ಸಂಸದರು, ಜಿತಿನ್ ರಾಮ್ ಮಾಂಝಿ ಓರ್ವ ಸಂಸದ ಹಾಗೂ ಜೆಡಿಎಸ್ ಇಬ್ಬರು ಸಂಸದರನ್ನು ಹೊಂದಿದ್ದರೂ ತಲಾ ಒಂದು ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ಪಡೆದಿವೆ. ಶಿವಸೇನೆಯು ಏಳು ಲೋಕಸಭಾ ಸ್ಥಾನಗಳನ್ನು ಹೊಂದಿದ್ದರೂ, ನಮಗೆ ಮಾತ್ರವೇಕೆ ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವ ಖಾತೆಗಳು? ಶಿವಸೇನೆಯು ಬಿಜೆಪಿಯ ಹಳೆಯ ಮೈತ್ರಿ ಪಕ್ಷ. ಈ ಕಾರಣಕ್ಕಾದರೂ ಶಿವಸೇನೆಗೆ ಸಂಪುಟ ಸಚಿವ ಸ್ಥಾನ ದೊರೆಯಬೇಕಿದೆ” ಎಂದು ಬಾರ್ನೆ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಶಿವಸೇನೆ 7 ಸ್ಥಾನಗಳು, ಎನ್ಸಿಪಿ ಒಂದು ಸ್ಥಾನ ಹಾಗೂ ಬಿಜೆಪಿ 9 ಸ್ಥಾನಗಳಲ್ಲಿ ಮಹಾರಾಷ್ಟ್ರದಲ್ಲಿ ಗೆಲುವು ಸಾಧಿಸಿದ್ದವು.