ಪ್ರಧಾನಿ ಮೋದಿ ವಾಪಸ್ಸಾದ ಬಳಿಕ ನನಗೆ ಯುದ್ಧರಂಗಕ್ಕೆ ಮರಳುವಂತೆ ಸೂಚಿಸಲಾಗಿದೆ: ರಷ್ಯಾ ಸೇನೆಯಲ್ಲಿರುವ ಪಂಜಾಬ್ ವ್ಯಕ್ತಿ
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (PTI)
ಮಾಸ್ಕೊ: ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ಸೇನೆಯಲ್ಲಿ ಭಾರತೀಯರು ಹೋರಾಡುತ್ತಿರುವ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಭೇಟಿ ವೇಳೆ ಪ್ರಸ್ತಾವಿಸಿದ ಕೆಲವೇ ದಿನಗಳಲ್ಲಿ, ತನಗೆ ಯುದ್ಧರಂಗಕ್ಕೆ ಮರಳುವಂತೆ ಸೂಚಿಸಲಾಗಿದೆ ಎಂದು ಪಂಜಾಬ್ ವ್ಯಕ್ತಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದರಿಂದ ತಾಯ್ನಾಡಿಗೆ ಮರಳುವ ತಮ್ಮ ಆಸೆಗೆ ರಷ್ಯಾ ಸೇನೆ ತಣ್ಣೀರೆರಚಿದಂತಾಗಿದೆ ಎಂದು ಅವರು ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.
ಪಂಜಾಬ್ನ ಗುರುದಾಸಪುರದ ಗಗನದೀಪ್ ಸಿಂಗ್ ಸೇರಿದಂತೆ ಹಲವು ಮಂದಿ ಭಾರತೀಯರು ತಮ್ಮನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಸೇನೆಗೆ ಸೇರಿಸಿಕೊಂಡು ಬಲವಂತವಾಗಿ ಯುದ್ಧಕಣಕ್ಕೆ ತಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಭಾರತಕ್ಕೆ ವಾಪಸ್ಸಾಗಲು ಬಯಸುವ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆ ನೀಡಿದ್ದರು.
ತಮ್ಮ ಸೇನೆಯ ಕಮಾಂಡರ್ ಸರ್ಕಾರದಿಂದ ಬಿಡುಗಡೆಗೆ ಆದೇಶ ಪಡೆಯಲು ನಿರಾಕರಿಸಿದ್ದಾರೆ ಎಂದು ಗಗನದೀಪ್ ಸಿಂಗ್ ಅವರು ಹೇಳಿದ್ದಾರೆ. "ಮೋದಿ ವಾಪಸ್ಸಾದ ಬಳಿಕ, ಇಡೀ ತಂಡ ಯುದ್ಧರಂಗಕ್ಕೆ ತೆರಳುತ್ತಿದೆ. ಈ ತಂಡದಲ್ಲಿ ಇರುವಂತೆ ನನಗೆ ಸೂಚಿಸಲಾಗಿದೆ. ರಷ್ಯಾದ ಜತೆ ಭಾರತ ಸರ್ಕಾರ ಮಾತನಾಡಿ, ಭಾರತಕ್ಕೆ ಮರಳಲು ಅನುವು ಮಾಡಿಕೊಡಬೇಕು" ಎಂದು ಅವರು ಹೇಳಿದ್ದಾರೆ. ಮೊಣಕಾಲು ಗಾಯದಿಂದ ಚೇತರಿಸಿಕೊಂಡಿರುವ ಅವರು ಯುದ್ಧರಂಗಕ್ಕೆ ಅನಿವಾರ್ಯವಾಗಿ ಮರಳಬೇಕಿದೆ.
ಮೊಣಕಾಲು ಗಾಯದಿಂದಾಗಿ ಯುದ್ಧರಂಗದಿಂದ ಶಿಬಿರಕ್ಕೆ ಸ್ಥಳಾಂತರಗೊಂಡಿದ್ದರು. ಇಲ್ಲಿ ಇವರಿಗೆ ಇಂಟರ್ನೆಟ್ ಸಂಪರ್ಕ ಇರುವುದರಿಂದ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ.