ಮಹಾರಾಷ್ಟ್ರ ಚುನಾವಣಾ: ಇವಿಎಂ-ವಿವಿಪ್ಯಾಟ್ ಗಳ ಪರಿಶೀಲನೆ ಕೋರಿದ ಎಂವಿಎ ಪರಾಜಿತ ಅಭ್ಯರ್ಥಿಗಳು
ಸಾಂದರ್ಭಿಕ ಚಿತ್ರ (Photo: PTI)
ಮುಂಬೈ: ಇತ್ತೀಚೆಗೆ ಪ್ರಕಟಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಪರಾಭವಗೊಂಡಿರುವ ಮಹಾವಿಕಾಸ್ ಅಘಾಡಿ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳ ಇವಿಎಂ-ವಿವಿಪ್ಯಾಟ್ ಗಳ ಪರಿಶೀಲನೆಗೆ ಕೋರಲು ನಿರ್ಧರಿಸಿದ್ದಾರೆ ಎಂದು ವಿರೋಧ ಪಕ್ಷಗಳ ಮೈತ್ರಿಕೂಟದ ನಾಯಕರೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆಯೊಂದಿಗೆ ನಡೆದ ಮಾತುಕತೆಯಲ್ಲಿ ಶಿವಸೇನೆ(ಉದ್ಧವ್ ಬಣ)ಯ ಹಲವಾರು ಅಭ್ಯರ್ಥಿಗಳು ವಿದ್ಯುನ್ಮಾನ ಮತ ಯಂತ್ರಗಳ ಕಾರ್ಯನಿರ್ವಹಣೆ ಕುರಿತು ಶಂಕೆ ವ್ಯಕ್ತಪಡಿಸಿದರು.
ಚುನಾವಣೆಯಲ್ಲಾಗಿರುವ ಹೀನಾಯ ಸೋಲಿನ ಕುರಿತು ಉದ್ಧವ್ ಠಾಕ್ರೆ ತಮ್ಮ ಮುಂಬೈನ ನಿವಾಸದಲ್ಲಿ ಪರಾಮರ್ಶೆ ನಡೆಸಿದರು.
ಮಂಗಳವಾರ PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮುಂಬೈನ ಚಾಂಡಿವಲಿ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡಿರುವ ಕಾಂಗ್ರೆಸ್ ನಾಯಕ ಆರಿಫ್ ನಸೀಮ್ ಖಾನ್, ನಾನು ಉದ್ಧವ್ ಠಾಕ್ರೆಯೊಂದಿಗೆ ಮಾತುಕತೆ ನಡೆಸಿದ್ದು, ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲಾಗಿದೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು ದೂರಿದ್ದಾರೆ ಎಂದು ಅವರೂ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
“ಫಲಿತಾಂಶದ ಕುರಿತು ಅನುಮಾನ ವ್ಯಕ್ತಪಡಿಸಿ ರಾಜ್ಯದೆಲ್ಲೆಡೆಯಿಂದ ನಮಗೆ ದೂರುಗಳು ಬರುತ್ತಿವೆ. ಪ್ರಜಾಪ್ರಭುತ್ವದಲ್ಲಿ ದೂರುಗಳ ಪರಿಶೀಲನೆ ನಡೆಯಬೇಕಾದ ಅಗತ್ಯವಿದ್ದು, ನಾನೂ ಸೇರಿದಂತೆ ನಮ್ಮಲ್ಲಿನ ಅನೇಕರು ಪರಿಶೀಲನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಅವರು ಹೇಳಿದ್ದಾರೆ.
ಈ ವರ್ಷದ ಎಪ್ರಿಲ್ 26ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಫಲಿತಾಂಶ ಪ್ರಕಟಗೊಂಡ ನಂತರ, ಯಾವುದೇ ಬಗೆಯ ತಿರುಚುವಿಕೆ ಅಥವಾ ಮಾರ್ಪಾಡಿನ ದೂರಿನ ಕುರಿತು ವಿದ್ಯುನ್ಮಾನ ಮತ ಯಂತ್ರಗಳ ತಯಾರಿಕಾ ಸಂಸ್ಥೆಯ ಎಂಜಿನಿಯರ್ ಗಳು ಪ್ರತಿ ವಿಧಾನಸಭಾ ಕ್ಷೇತ್ರದ ಶೇ ಶೇ. 5ರಷ್ಟು ವಿದ್ಯುನ್ಮಾನ ಮತ ಯಂತ್ರಗಳ ನಿಯಂತ್ರಣ ಘಟಕ, ಮತ ಪತ್ರ ಘಟಕ ಹಾಗೂ ವಿವಿಪ್ಯಾಟ್ ಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಅತ್ಯಧಿಕ ಮತಗಳನ್ನು ಪಡೆದಿರುವ ಅಭ್ಯರ್ಥಿಯ ನಂತರ ಎರಡು ಅಥವಾ ಮೂರನೆ ಸ್ಥಾನದಲ್ಲಿರುವ ಅಭ್ಯರ್ಥಿಗಳು ಈ ಕುರಿತು ಲಿಖಿತ ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಅಂತಹ ಮನವಿಯನ್ನು ಫಲಿತಾಂಶ ಪ್ರಕಟಗೊಂಡ ಏಳು ದಿನಗಳೊಳಗಾಗಿ ಸಲ್ಲಿಸಬೇಕಾಗುತ್ತದೆ ಎಂದು ಆರಿಫ್ ನಸೀಮ್ ಖಾನ್ ಹೇಳಿದ್ದಾರೆ.
ನವೆಂಬರ್ 23ರಂದು ಪ್ರಕಟಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ 288 ಸ್ಥಾನಗಳ ಪೈಕಿ 230 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಮರಳಿತ್ತು. ಆದರೆ, ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದ ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಕೇವಲ 46 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿ ಹೀನಾಯವಾಗಿ ಪರಾಭವಗೊಂಡಿತ್ತು.