ವಿಧಿ 370ರ ರದ್ದತಿ ಬಳಿಕ ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಉಲ್ಬಣ; ಅಧಿಕೃತ ಅಂಕಿಅಂಶಗಳಿಂದ ಬಹಿರಂಗ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಇತ್ತೀಚಿಗೆ ಅನಾವರಣಗೊಂಡ ಅಧಿಕೃತ ಅಂಕಿಅಂಶಗಳಂತೆ ಆಗಸ್ಟ್ 2019ರಲ್ಲಿ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಜಮ್ಮು ಪ್ರದೇಶವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಅನಿರೀಕ್ಷಿತ ಉಲ್ಬಣದೊಂದಿಗೆ ತತ್ತರಿಸಿದೆ. ಕಳವಳಕಾರಿ ಚಿತ್ರಣವನ್ನು ಬಿಂಬಿಸಿರುವ ಈ ಅಂಕಿಅಂಶಗಳು 2019,ಆ.5 ಮತ್ತು 2023,ಜೂ.16ರ ನಡುವೆ ಭಯೋತ್ಪಾದಕರು ಮತ್ತು ಅವರ ಸುಪ್ತ ಸಹಚರರ ಬಂಧನಗಳಲ್ಲಿ ಶೇ.71ರಷ್ಟು ಹೆಚ್ಚಳವನ್ನು ತೋರಿಸಿದೆ ಎಂದು ವರದಿಯಾಗಿದೆ.
ಆಶ್ಚರ್ಯಕರವಾಗಿ ಈ ಅಂಕಿ ಅಂಶಗಳು ಭದ್ರತಾ ಆಯಾಮಗಳಲ್ಲಿ ದಿಗ್ಭ್ರಮೆಗೊಳಿಸುವ ಬದಲಾವಣೆಯನ್ನು ಬಹಿರಂಗಗೊಳಿಸಿದೆ. 2015, ಅ.27 ಮತ್ತು 2019, ಆ.5ರ ನಡುವೆ ಜಮ್ಮು ಪ್ರದೇಶದಲ್ಲಿ ದಾಖಲಾಗಿದ್ದ ನಾಲ್ಕು ಗ್ರೆನೇಡ್ ಮತ್ತು ಏಳು ಸುಧಾರಿತ ಸ್ಫೋಟಕ ಸಾಧನ (ಐಇಡಿ) ದಾಳಿಗಳಿಗೆ ಹೋಲಿಸಿದರೆ ನಂತರ ಎಂಟು ಗ್ರೆನೇಡ್ ಮತ್ತು 13 ಐಇಡಿ ದಾಳಿಗಳು ನಡೆದಿವೆ. 2015-19ಕ್ಕೆ ಹೋಲಿಸಿದರೆ 2019-23ರ ಅವಧಿಯಲ್ಲಿ ಐಇಡಿಯಿಂದ ಸಂಭವಿಸಿದ ಸಾವುಗಳು ಶೇ.73ರಷ್ಟು ಆತಂಕಕಾರಿ ಏರಿಕೆಯನ್ನು ಕಂಡಿದ್ದು,ಇದು ಈ ಮಾರಣಾಂತಿಕ ದಾಳಿಗಳ ತೀವ್ರತೆಗೆ ಉದಾಹರಣೆಯಾಗಿದೆ.
ವಿಧಿ 370 ರದ್ದತಿಯ ಮೊದಲಿನ ಮತ್ತು ನಂತರದ ಅವಧಿಗಳನ್ನು ಹೋಲಿಸಿದರೆ ಭಯೋತ್ಪಾದಕ ದಾಳಿಗಳಲ್ಲಿ ಶೇ.43ರಷ್ಟು ಏರಿಕೆ ಕಂಡುಬಂದಿದೆ,ಜೊತೆಗೆ ಭಯೋತ್ಪಾದಕರ ನೇಮಕಾತಿಯಲ್ಲಿ ಶೇ.39ರಷ್ಟು ಹೆಚ್ಚಳವಾಗಿದೆ. ಇದು ಜಮ್ಮು ಪ್ರದೇಶದಲ್ಲಿ ವಿಕಸನಗೊಳ್ಳುತ್ತಿರುವ ಭದ್ರತಾ ಸವಾಲುಗಳ ಕಟುವಾದ ಚಿತ್ರಣವನ್ನು ಒದಗಿಸಿದೆ.
ಆದರೂ ಭಯೋತ್ಪಾದಕ ಚಟುವಟಿಕೆಗಳ ಪ್ರಕ್ಷುಬ್ಧ ಉಲ್ಬಣದ ನಡುವೆಯೂ ವಿರೋಧಾಭಾಸವೊಂದು ಹೊರಹೊಮ್ಮಿದೆ. ಭಯೋತ್ಪಾದಕ ದಾಳಿಗಳಿಂದ ನಾಗರಿಕರ ಮತ್ತು ಭದ್ರತಾ ಪಡೆಗಳಲ್ಲಿ ಸಾವುನೋವುಗಳಲ್ಲಿ ಗಮನಾರ್ಹವಾದ ಇಳಿಕೆಯನ್ನು ಅಂಕಿಅಂಶಗಳು ಎತ್ತಿ ತೋರಿಸಿವೆ. ವಿಧಿ 370ರ ರದ್ದತಿಯ ಬಳಿಕ ನಾಗರಿಕರ ಸಾವುನೋವುಗಳು ಶೇ.63ರಷ್ಟು ಮತ್ತು ಭದ್ರತಾ ಪಡೆಗಳಲ್ಲಿ ಶೇ.13ರಷ್ಟು ಇಳಿಕೆಯಾಗಿವೆ.
ಜಮ್ಮು ಪ್ರದೇಶದಲ್ಲಿಯ ದೈನಂದಿನ ಜೀವನವು ಸ್ಪಷ್ಟ ಬದಲಾವಣೆಯನ್ನು ಕಂಡಿದೆ. ಶಸ್ತ್ರಾಸ್ತ್ರಗಳ ಕಸಿದುಕೊಳ್ಳುವಿಕೆ,ಕಲ್ಲು ತೂರಾಟ ಘಟನೆಗಳು ಹಾಗು ಹರತಾಳ ಮತ್ತು ಬಂದ್ಗಳಿಗೆ ಕರೆಗಳು ಅನುಕ್ರಮವಾಗಿ ಶೇ.80.ಶೇ.62 ಮತ್ತು ಶೇ.42ರಷ್ಟು ಕುಸಿತವನ್ನು ಕಂಡಿವೆ.
ಗಡಿ ಜಿಲ್ಲೆಗಳಾದ ರಾಜೌರಿ ಮತ್ತು ಪೂಂಛ್ಗಳನ್ನು ಭಯೋತ್ಪಾದಕ ಘಟನೆಗಳ ಕೇಂದ್ರ ಬಿಂದುವನ್ನಾಗಿ ಅಧಿಕಾರಿಗಳು ಗುರುತಿಸಿದ್ದಾರೆ. ಈ ಪ್ರದೇಶಗಳಲ್ಲಿ 2019.ಆ.5ರಿಂದ ವಿವಿಧ ಎನ್ಕೌಂಟರ್ಗಳಲ್ಲಿ 65ಕ್ಕೂ ಅಧಿಕ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ.