ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದ ಬಳಿಕ ವಿಶ್ವಕಪ್ ವಿಜೇತ ತಂಡದ ಫೋಟೋವನ್ನು ತೆಗೆದ ಯೂಸುಫ್ ಪಠಾಣ್
ಯೂಸುಫ್ ಪಠಾಣ್ | Photo: PTI
ಕೋಲ್ಕತ್ತಾ: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ತಮ್ಮ ಬೆಂಬಲಿಗರು ಬಳಸುತ್ತಿದ್ದ ವಿಶ್ವಕಪ್ ವಿಜಯದ ಕ್ಷಣಗಳ ಫೋಟೋಗಳನ್ನು ಮಾಜಿ ಕ್ರಿಕೆಟಿಗ ಹಾಗೂ ಬೆಹರಮ್ ಪುರ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿರುವ ಯೂಸುಫ್ ಪಠಾಣ್ ತೆಗೆದು ಹಾಕಿದ್ದಾರೆ.
2011ರಲ್ಲಿ ವಿಶ್ವಕಪ್ ಅನ್ನು ಜಯಿಸಿದ್ದ ಭಾರತ ತಂಡದ ಚಿತ್ರಗಳನ್ನು ಬಳಸಿಕೊಳ್ಳುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕವು ಚುನಾವಣಾ ಆಯೋಗಕ್ಕೆ ದೂರು ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಆಗ್ರಹಿಸಿದ್ದ ಪಶ್ಚಿಠಮ ಬಂಗಾಳ ಕಾಂಗ್ರೆಸ್ ಘಟಕವು, ವಿಶ್ವಕಪ್ ವಿಜೇತ ತಂಡದ ಬ್ಯಾನರ್ ಗಳು ಹಾಗೂ ಬಿತ್ತಿ ಚಿತ್ರಗಳನ್ನು ಬಳಸುವುದು ಸಂಪೂರ್ಣವಾಗಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.
ಕಾಂಗ್ರೆಸ್ ಪಕ್ಷದ ದೂರನ್ನು ಗಣನೆಗೆ ತೆಗೆದುಕೊಂಡ ಚುನಾವಣಾ ಆಯೋಗವು, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರಿಗೆ ಭಾವಚಿತ್ರಗಳನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಅದರಂತೆ ಮುರ್ಷಿದಾಬಾದ್ ಜಿಲ್ಲೆಯ ಕಾಂಡಿ ಪೊಲೀಸ್ ಠಾಣೆಯ ಎದುರು ಹಾಕಲಾಗಿದ್ದ ಸಹ ಆಟಗಾರರೊಂದಿಗೆ ಯೂಸುಫ್ ಪಠಾಣ್ ಇರುವ ಫೋಟೋ ಹೊಂದಿರುವ ಜಾಹೀರಾತು ಫಲಕವನ್ನು ತೆಗೆದು ಹಾಕಲಾಗಿದೆ.
ಯೂಸುಫ್ ಪಠಾಣ್ ಬೆಹರಮ್ ಪುರ್ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಈ ಕ್ಷೇತ್ರವನ್ನು ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ ಪ್ರತಿನಿಧಿಸುತ್ತಿದ್ದಾರೆ.