ಆಗ್ರಾದಲ್ಲಿ ಮೊಘಲರ ಕಾಲದ ಪಾರಂಪರಿಕ ತಾಣವನ್ನು ಕೆಡವಿದ ಅಧಿಕಾರಿಗಳು : ವರದಿ
PC : thewire.in
ಆಗ್ರಾ: ಉತ್ತರಪ್ರದೇಶದ ಆಗ್ರಾದಲ್ಲಿ 17ನೇ ಶತಮಾನದ ಮೊಘಲರ ಕಾಲದ ಪಾರಂಪರಿಕ ತಾಣವಾದ ʼಮುಬಾರಕ್ ಮಂಝಿಲ್ʼ ಅನ್ನು ಬಹುತೇಕವಾಗಿ ಕೆಡವಲಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಅಧಿಕಾರಿಗಳು ಮತ್ತು ಬಿಲ್ಡರ್ ಗಳು ಸೇರಿಕೊಂಡು ಪಾರಂಪರಿಕ ತಾಣವನ್ನು ಕೆಡವಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೊಘಲ್ ಚಕ್ರವರ್ತಿ ಔರಂಗಜೇಬ್ ನಿರ್ಮಿಸಿದ ʼಮುಬಾರಕ್ ಮಂಝಿಲ್ʼ ʼಔರಂಗಜೇಬನ ಹವೇಲಿʼ ಎಂದೇ ಪ್ರಸಿದ್ದಿಯನ್ನು ಪಡೆದಿತ್ತು. ಈ ತಾಣವನ್ನು ಶಹಜಹಾನ್, ಶುಜಾ ಮತ್ತು ಔರಂಗಜೇಬ್ ಸೇರಿದಂತೆ ಪ್ರಮುಖ ಮೊಘಲ್ ರಾಜರು ವಾಸಕ್ಕೆ ಬಳಸುತ್ತಿದ್ದರು. ನಂತರ ಬ್ರಿಟಿಷ್ ಆಳ್ವಿಕೆಯಲ್ಲಿ ವಿವಿಧ ಉದ್ದೇಶಗಳಿಗೆ ಈ ಪಾರಂಪರಿಕ ತಾಣವನ್ನು ಬಳಸಲಾಗಿದೆ.
ರಾಜ್ಯ ಪುರಾತತ್ವ ಇಲಾಖೆಯು ಈ ಸ್ಮಾರಕವನ್ನು ರಕ್ಷಿಸಲು ಸೆಪ್ಟೆಂಬರ್ ನಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಕುರಿತು ಆಕ್ಷೇಪಣೆಗಳಿದ್ದರೆ ಒಂದು ತಿಂಗಳೊಳಗೆ ಸಲ್ಲಿಸುವಂತೆ ಹೇಳಿತ್ತು. ಆದರೆ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ, ಲಕ್ನೋದ ಅಧಿಕಾರಿಗಳು ಎರಡು ವಾರಗಳ ಹಿಂದೆ ಸಂರಕ್ಷಣಾ ಕ್ರಮವನ್ನು ಕೈಗೊಳ್ಳಲು ಸ್ಥಳಕ್ಕೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಮುಬಾರಕ್ ಮಂಝಿಲ್ ನ 70% ದಷ್ಟು ರಚನೆಯನ್ನು ಕೆಡವಲಾಗಿದೆ.
ಆಗ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ ಮಲ್ಲಪ್ಪ ಬಂಗಾರಿ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ಈ ಬಗ್ಗೆ ಗಮನಹರಿಸಿದ್ದೇವೆ. ಉಪ ವಿಭಾಗಾಧಿಕಾರಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.