ಅಬುಧಾಬಿಯಲ್ಲಿ ಐಐಟಿ ಡೆಲ್ಲಿ ಕ್ಯಾಂಪಸ್ ಸ್ಥಾಪನೆಗೆ ಒಪ್ಪಂದ
Photo : PTI
ಹೊಸದಿಲ್ಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಡೆಲ್ಲಿ ಕ್ಯಾಂಪಸ್ ನ ಶಾಖೆಯೊಂದನ್ನು ಅಬುಧಾಬಿಯಲ್ಲಿ ಸ್ಥಾಪಿಸುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಐಐಟಿ ಡೆಲ್ಲಿ ಶನಿವಾರ ಸಹಿ ಹಾಕಿದೆ. ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದವು ‘ಐಐಟಿಸ್ ಗೋ ಗ್ಲೋಬಲ್’ ಅಭಿಯಾನಕ್ಕೆ ಇನ್ನೊಂದು ಸೇರ್ಪಡೆಯಾಗಿದೆ. ಇದು ಐಐಟಿ ಮೆಡ್ರಾಸ್, ತಾಂಝಾನಿಯದ ಝಂಝಿಬಾರ್ ನಲ್ಲಿ ಸ್ಥಾಪಿಸಿರುವ ಕ್ಯಾಂಪಸ್ ಬಳಿಕ ಎರಡನೇ ಅಂತರ್ರಾಷ್ಟ್ರೀಯ ಐಐಟಿ ಕ್ಯಾಂಪಸ್ ಆಗಿದೆ.
‘‘ಯುಎಇಯಲ್ಲಿ ಐಐಟಿ ಡೆಲ್ಲಿ ಕ್ಯಾಂಪಸ್ ಸ್ಥಾಪನೆ ಹೊಸ ಭಾರತದ ಹೊಸತನ ಮತ್ತು ಪರಿಣತಿಯ ದ್ಯೋತಕವಾಗಿದೆ. ಇದು ಭಾರತ-ಯುಎಇ ಗೆಳೆತನದ ಸ್ಮಾರಕವಾಗಲಿದೆ. ಇದು ನೂತನ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾಗಿರುವ ಜ್ಞಾನದ ಶಕ್ತಿಗೆ ಪರಿಪೂರ್ಣ ಉದಾಹರಣೆಯಾಗಿದೆ’’ ಎಂದು ಭಾರತದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಟ್ವೀಟ್ ಮಾಡಿದ್ದಾರೆ.
ಅಬುಧಾಬಿ ಕ್ಯಾಂಪಸ್ನಲ್ಲಿ 2024ರಿಂದ ಪದವಿ ಶಿಕ್ಷಣವನ್ನು ನೀಡಲಾಗುತ್ತದೆ.