ಗುಜರಾತ್ ಆರೋಗ್ಯ ಸೇವೆಗೆ ಕಳಂಕ ತರುವ ವಿಡಿಯೋ ಪೋಸ್ಟ್ ಮಾಡಿದ ಆರೋಪ: ಬೆಂಗಳೂರು ಮೂಲದ X ಬಳಕೆದಾರನ ವಿರುದ್ಧ ಎಫ್ಐಆರ್
ಅಹಮದಾಬಾದ್: ಗುಜರಾತ್ ರಾಜ್ಯದ ಕಳಂಕ ತರುವಂತಹ ವಿಡಿಯೊ ಹಂಚಿಕೊಂಡ ಆರೋಪದ ಮೇಲೆ ಅಹಮದಾಬಾದ್ ಸೈಬರ್ ಘಟಕದ ಪೊಲೀಸರು ಎಕ್ಸ್ ಬಳಕೆದಾರರೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ʼಮಿಸ್ ಪಾಯಲ್ ಗುಪ್ತʼ ಎಂಬ ಖಾತೆಯನ್ನು ನಿರ್ವಹಿಸುವ ಪಾಯಲ್ ಗುಪ್ತ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಕೆ ತಾನು ಬೆಂಗಳೂರು ಮೂಲದವಳು ಎಂದು ಖಾತೆಯ ಸ್ವವಿವರದಲ್ಲಿ ಹೇಳಿಕೊಂಡಿದ್ದಾರೆ.
ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದ ಪಾಯಲ್ ಗುಪ್ತಾ, “ಅಪಘಾತದ ನಂತರ, ರೋಗಿಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ, ಸ್ಥಳಾಭಾವದಿಂದ ಆ ರೋಗಿ ನೆಲದ ಮೇಲೆಯೇ ಮೃತಪಟ್ಟ. ಈ ವಿಡಿಯೊ ಗುಜರಾತ್ ದೆಂದು ಹೇಳಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು. ತದನಂತರ, ಪಾಯಲ್ ಗುಪ್ತಾ ಆ ವಿಡಿಯೊವನ್ನು ಅಳಿಸಿ ಹಾಕಿದ್ದರು.
ಆದರೆ, ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ ಸೂಚನೆ ಮೇರೆಗೆ ಪೊಲೀಸರು ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವಾಸ್ತವಾಂಶವನ್ನು ಪರಿಶೀಲಿಸದೆ, ಗುಜರಾತ್ ಆರೋಗ್ಯ ಸೇವೆಗೆ ಹಾನಿಯನ್ನುಂಟು ಮಾಡುವ ಹಾಗೂ ಗುಜರಾತ್ ಆರೋಗ್ಯ ಸೇವೆಗಳ ಬಗ್ಗೆ ಜನರ ವಿಶ್ವಾಸವನ್ನು ಕುಗ್ಗಿಸಿ, ದ್ವೇಷ ಮತ್ತು ಆಕ್ರೋಶವನ್ನು ಸೃಷ್ಟಿಸುವ ಕ್ರಿಮಿನಲ್ ಉದ್ದೇಶದೊಂದಿಗೆ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ ಎಂದು ಅಹಮದಾಬಾದ್ ಪೊಲೀಸರು ಆರೋಪಿಸಿದ್ದಾರೆ.
ಸದರಿ ವಿಡಿಯೊ ಛತ್ತೀಸ್ ಗಢದ್ದಾಗಿದ್ದು, ಗುಜರಾತ್ ನದ್ದಲ್ಲ ಎಂದೂ ಎಫ್ಐಆರ್ ನಲ್ಲಿ ಹೇಳಲಾಗಿದೆ.