ಸಿಜೆಐ ಮೊಗದಲ್ಲಿ ಮಂದಹಾಸ ಮೂಡಿಸಿದ ಮರಣದಂಡನೆ ಕುರಿತು AI ರೋಬೊಟ್ ನ್ಯಾಯವಾದಿ ಹೇಳಿಕೆ
ಡಿ.ವೈ.ಚಂದ್ರಚೂಡ್ | PC : ANI
ಹೊಸದಿಲ್ಲಿ : ಕೃತಕ ಬುದ್ಧಿಮತ್ತೆ(AI) ಎಲ್ಲೆಡೆ ಇರುವಂತೆ ಕಂಡು ಬರುತ್ತಿದೆ,ಬಹುಶಃ ನ್ಯಾಯಾಲಯಗಳಲ್ಲಿಯೂ. ಗುರುವಾರ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಷನಲ್ ಜ್ಯುಡಿಷಿಯಲ್ ಮ್ಯೂಸಿಯಂ ಮತ್ತು ಆರ್ಕೈವ್(ಎನ್ಜೆಎಂಎ)ನ ಉದ್ಘಾಟನೆ ಸಂದರ್ಭದಲ್ಲಿ AI ರೋಬೊಟ್ ನ್ಯಾಯವಾದಿಯನ್ನು ಪರಿಚಯಿಸಿ ಅದಕ್ಕೆ ಪ್ರಶ್ನೆಯೊಂದನ್ನು ಕೇಳಿದ್ದರು. AI ನ್ಯಾಯವಾದಿ ನೀಡಿದ ಉತ್ತರ ಸಿಜೆಐ ಮೊಗದಲ್ಲಿ ಮಂದಹಾಸವನ್ನು ಮೂಡಿಸಿತ್ತು.
ಮರಣ ದಂಡನೆ ಕುರಿತು ಪ್ರಶ್ನೆಯೊಂದನ್ನು ಕೇಳಿ AI ರೋಬೊಟ್ ನ್ಯಾಯವಾದಿಯ ಜ್ಞಾನವನ್ನು ಪರೀಕ್ಷಿಸಲು ನ್ಯಾ.ಚಂದ್ರಚೂಡ್ ನಿರ್ಧರಿಸಿದ್ದರು. ‘ಮರಣ ದಂಡನೆಯು ಭಾರತದಲ್ಲಿ ಸಾಂವಿಧಾನಿಕವೇ?’ ಎಂದು ಅವರು ಪ್ರಶ್ನಿಸಿದಾಗ “ಹೌದು, ಮರಣದಂಡನೆಯು ಭಾರತದಲ್ಲಿ ಸಾಂವಿಧಾನಿಕವಾಗಿದೆ. ಅಪರಾಧವು ಅತ್ಯಂತ ಘೋರವಾಗಿದೆ ಮತ್ತು ಇಂತಹ ಶಿಕ್ಷೆಯ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದ ಅಪರೂಪದಲ್ಲಿ ಅಪರೂಪದ ಪ್ರಕರಣಗಳಿಗೆ ಅದನ್ನು ಮೀಸಲಿರಿಸಲಾಗಿದೆ” ಎಂಬ AI ನ್ಯಾಯವಾದಿಯ ಉತ್ತರ ಸಿಜೆಐ ಮೊಗದಲ್ಲಿ ಮಂದಹಾಸವನ್ನು ಮೂಡಿಸಿತ್ತು. ಉಪಸ್ಥಿತರಿದ್ದ ವಕೀಲರೂ ಈ ಉತ್ತರವನ್ನು ಮೆಚ್ಚಿಕೊಂಡರು.
ಮ್ಯೂಸಿಯಂ ಅನ್ನು ಉದ್ಘಾಟಿಸಿ ಮಾತನಾಡಿದ ಸಿಜೆಐ,‘ಈ ವಸ್ತು ಸಂಗ್ರಹಾಲಯದ ಪರಿಕಲ್ಪನೆ ಮತ್ತು ಯೋಜನೆಯು ಒಂದೂವರೆ ವರ್ಷಗಳನ್ನು ತೆಗೆದುಕೊಂಡಿತ್ತು. ಇದು ನಮ್ಮ ರಾಷ್ಟ್ರಕ್ಕೆ ನ್ಯಾಯಾಲಯದ ಮಹತ್ವದ ತತ್ವವನ್ನು ಪ್ರತಿಬಿಂಬಿಸುತ್ತದೆ. ಈ ಮ್ಯೂಸಿಯಂ ಯುವ ತಲೆಮಾರಿಗೆ ಸಂವಾದ ಸ್ಥಳವಾಗಲಿದೆ’ ಎಂದು ಹೇಳಿದರು.
“ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನಾಗರಿಕರು ಇಲ್ಲಿಗೆ ಭೇಟಿ ನೀಡಬೇಕು. ಕಾನೂನಿನ ಆಡಳಿತದ ಮಹತ್ವ ಮತ್ತು ನ್ಯಾಯಾಧೀಶರು ಹಾಗೂ ವಕೀಲರು ಮಾಡುವ ಕೆಲಸಗಳ ಜೀವಂತ ಅನುಭವವನ್ನು ಅವರು ಪಡೆಯಬೇಕು” ಎಂದು ಹೇಳಿದರು. ಇದು ನ್ಯಾಯಾಧೀಶ ಕೇಂದ್ರಿತವಲ್ಲ ಎಂದರು.
ಸಿ ಜೆ ಐ ಚಂದ್ರಚೂಡ್ ನ.10ರಂದು ಸೇವೆಯಿಂದ ನಿವೃತ್ತರಾಗಲಿದ್ದು, ನ್ಯಾ.ಸಂಜೀವ ಖನ್ನಾ ಅವರು ನ.11ರಂದು ಭಾರತದ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.