ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರಿಂದ ಭ್ರಷ್ಟಾಚಾರ ; ಪ್ರಧಾನ ಕಾನೂನು ಸಲಹೆಗಾರರಿಂದ ಪ್ರಧಾನಿಗೆ ಪತ್ರ

Photo:NDTV
ಹೊಸದಿಲ್ಲಿ : ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅಧ್ಯಕ್ಷ ಕಲ್ಯಣ್ ಚೌಬೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಫೆಡರೇಶನ್ನ ಪ್ರಧಾನ ಕಾನೂನು ಸಲಹೆಗಾರ ನೀಲಾಂಜನ್ ಭಟ್ಟಾಚಾರ್ಜಿ ಶನಿವಾರ ಆರೋಪಿಸಿದ್ದಾರೆ.
ಅಪಾರದರ್ಶಕ ಟೆಂಡರ್ ಪ್ರಕ್ರಿಯೆಗಳು ಮತ್ತು ತನಗೆ ಬೇಕಾದವರಿಗೆ ಟೆಂಡರ್ಗಳನ್ನು ನೀಡುವ ಮೂಲಕ ಚೌಬೆ “ಭ್ರಷ್ಟಾಚಾರದ ದಾರಿಗಳನ್ನು’’ ತೆರೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಭಟ್ಟಾಚಾರ್ಜಿ ಹೇಳಿದ್ದಾರೆ.
ಫೆಡರೇಶನ್ನ ಬೊಕ್ಕಸದಿಂದಿ ಹಣವನ್ನು ತೆಗೆಯಲು ಚೌಬೆ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ತನ್ನ ವೈಯಕ್ತಿಕ ವೆಚ್ಚಗಳಿಗಾಗಿ ಫೆಡರೇಶನ್ನ ಹಣವನ್ನು ಬಳಸಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
“ಬಲವಂತದಿಂದ ಮತ್ತು ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರು ಹಲವಾರು ಟೆಂಡರ್ಗಳನ್ನು ಕೊಟ್ಟಿದ್ದಾರೆ. ಕಳೆದ ವರ್ಷದ ಐ-ಲೀಗ್, ಐಡಬ್ಲ್ಯುಎಲ್, ಸಂತೋಷ್ ಟ್ರೋಫಿ ಪಂದ್ಯಾವಳಿಗಳ ಪ್ರಸಾರ ಹಕ್ಕುಗಳನ್ನು ಅವರು ಒಂದು ಕಂಪೆನಿಗೆ ಕೊಟ್ಟಿದ್ದಾರೆ. ಆ ಕಂಪೆನಿಯು ಅವರ ನಿಕಟವರ್ತಿಗೆ ಸೇರಿದ್ದಾಗಿದೆ’’ ಎಂಬುದಾಗಿ ತನ್ನ ಪತ್ರದಲ್ಲಿ ಭಟ್ಟಾಚಾರ್ಜಿ ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.