ಏಮ್ಸ್ನಲ್ಲಿ ಆಧ್ಯಾತ್ಮಿಕ ವಿಭಾಗ ಆರಂಭಿಸಲು ಪ್ರಸ್ತಾವನೆ; ವ್ಯಾಪಕ ವಿರೋಧ
Photo: PTI
ಹೊಸದಿಲ್ಲಿ: ರಾಜಧಾನಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್ನಲ್ಲಿ ಆಧ್ಯಾತ್ಮಿಕ ವಿಭಾಗ (ಸ್ಪಿರಿಚುವಲ್ ಮೆಡಿಸಿನ್) ಆರಂಭಿಸುವ ಪ್ರಸ್ತಾವನೆಗೆ ಅಲ್ಲಿನ ಎಲ್ಲಾ ಸಿಬ್ಬಂದಿಗಳ ವಿರೋಧ ವ್ಯಕ್ತವಾಗಿದೆ. ಇದು ಸಂಸ್ಥೆಯ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಕೆಲ ದಿನಗಳ ಹಿಂದೆ ಜಾರಿಯಾದ ಆಫೀಸ್ ಮೆಮೊರಾಂಡಂ ಮೂಲಕ ಈ ಪ್ರಸ್ತಾವನೆ ಮುಂದಿಟ್ಟಿರುವುದನ್ನೂ ಹಲವರು ಪ್ರಶ್ನಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಈ ಪ್ರಸ್ತಾವಿತ ಹೊಸ ವಿಭಾಗದ ಕುರಿತು ಯಾವುದೇ ಸ್ಪಷ್ಟತೆಯಿಲ್ಲ. ಪಠ್ಯಕ್ರಮದ ಕುರಿತೂ ಯಾವುದೇ ಮಾಹಿತಿಯಿಲ್ಲ. ಈ ಪ್ರಸ್ತಾವನೆ ಮುಂದಿಟ್ಟ ವಿಭಾಗದಲ್ಲಿ ಈ ಕುರಿತು ಮೊದಲು ಚರ್ಚೆ ನಡೆದು ನಂತರ ಎಲ್ಲಾ ಶಿಕ್ಷಕ ಸಿಬ್ಬಂದಿಗಳಿರುವ ಮಂಡಳಿ ಮುಂದೆ ಇರಿಸಬೇಕಾಗಿದೆ. ಆದರೆ ಹೊಸ ವಿಭಾಗ ರಚನೆಗೆ ನೇರ ಸಮಿತಿ ರಚನೆಗೆ ಮುಂದಾಗಿರುವುದು ಅಚ್ಚರಿ,” ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಏಮ್ಸ್ ಆಡಳಿತವು ಆಫೀಸ್ ಮೆಮೊರಾಂಡಂ ಜಾರಿಗೊಳಿಸಿ ಈ ಮೂಲಕ ಟ್ರಾನ್ಸ್ಪ್ಲಾಂಟ್ ಮೆಡಿಸಿನ್, ಮೆಡಿಕಲ್ ಎಜುಕೇಶನ್ ಮತ್ತು ಸ್ಪಿರಿಚುವಲ್ ಮೆಡಿಸಿನ್ ವಿಭಾಗದ ರಚನೆಯ ರೂಪುರೇಷೆ ರಚಿಸಲು ಸಮಿತಿ ರಚನೆಗೆ ಮುಂದಾಗಿತ್ತು.
ಆದರೆ ಇದು ಕಾರ್ಯಗತಗೊಳ್ಳಲು ಹಲವು ಅನುಮೋದನೆಗಳ ಅಗತ್ಯವಿದೆ. ಸ್ಟಾಫ್ ಕೌನ್ಸಿಲ್ ಅನುಮೋದನೆ ದೊರೆತಲ್ಲಿ ಡೀನ್ಸ್ ಸಮಿತಿ ಹಾಗು ನಂತರ ಶೈಕ್ಷಣಿಕ ಸಮಿತಿ ಮುಂದೆ ಹೋಗಲಿದೆ. ನಂತರ ಹಣಕಾಸು ಸ್ಥಾಯಿ ಸಮಿತಿಯ ಅನುಮೋದನೆ ಬೇಕಿದ್ದು ಎಲ್ಲಾ ಸಮಿತಿಗಳ ಅನುಮೋದನೆ ಪಡೆಯುವುದು ಕಷ್ಟಕರ ಎಂದು ಮೂಲಗಳು ತಿಳಿಸಿವೆ.