‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’: ನಾಯಿಗೆ ಹೆಸರಿಟ್ಟ ವಿಚಾರಕ್ಕೆ ರಾಹುಲ್ ಗಾಂಧಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಎಐಎಂಐಎಂ ಮುಖಂಡ
Screengrab: YouTube/Rahul Gandhi
ಪ್ರಯಾಗ್ರಾಜ್: ತನ್ನ ತಾಯಿ ಸೋನಿಯಾ ಗಾಂಧಿ ಅವರಿಗೆ ‘ನೂರಿ’ ಎಂಬ ನಾಯಿಯನ್ನು ಉಡುಗೊರೆಯಾಗಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಐಎಂಐಎಂ ನಾಯಕರೊಬ್ಬರು ಇಲ್ಲಿನ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹೆಸರು ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅವರು ಆರೋಪಿಸಿದ್ದಾರೆ.
ನಾಯಿಯ ಹೆಸರು ತನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ, ‘ನೂರಿ’ ಪದವು ನಿರ್ದಿಷ್ಟವಾಗಿ ಇಸ್ಲಾಂಗೆ ಸಂಬಂಧಿಸಿದೆ, ಅಲ್ಲದೆ, ಕುರ್ ಆನ್ನಲ್ಲಿ ಕೂಡಾ ಈ ಉಲ್ಲೇಖವನ್ನು ಕಾಣಬಹುದು ಎಂದು ಎಐಎಂಐಎಂ ಮುಖಂಡ ಮಹಮ್ಮದ್ ಫರ್ಹಾನ್ ಹೇಳಿದ್ದಾರೆ.
ಎಐಎಂಐಎಂ ನಾಯಕ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕಚೇರಿ ಖಚಿತಪಡಿಸಿದೆ.
ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸೋಮವಾರ ಜುಡಿಕಲ್ ಮ್ಯಾಜಿಸ್ರೇಟ್ ಅವಿರಾಲ್ ಸಿಂಗ್ ನ್ಯಾಯಾಲಯವನ್ನು ಸಂಪರ್ಕಿಸಿದ್ದೇವೆ ಎಂದು ಫರ್ಹಾನ್ ಅವರ ವಕೀಲ ಮುಹಮ್ಮದ್ ಅಲಿ ಪಿಟಿಐಗೆ ತಿಳಿಸಿದ್ದಾರೆ.