ಲೋಕಸಭಾ ಚುನಾವಣೆ: ತಮಿಳುನಾಡಿನಲ್ಲಿ ಅಸದುದ್ದೀನ್ ಉವೈಸಿ ಪಕ್ಷ, ಎಐಎಡಿಎಂಕೆ ಪಕ್ಷಗಳ ನಡುವೆ ಮೈತ್ರಿ
Photo : PTI
ಹೈದರಾಬಾದ್: ಎಪ್ರಿಲ್ 19ರಂದು ತಮಿಳುನಾಡಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಗೆ ಬೆಂಬಲಿಸುವುದಾಗಿ ಶನಿವಾರ ಎಐಎಂಐಎಂ ಪ್ರಕಟಿಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, “ತಮಿಳುನಾಡಿನಲ್ಲಿ ಈ ಮೈತ್ರಿಯು 2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ” ಎಂದು ಘೋಷಿಸಿದ್ದಾರೆ.
“ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಐಎಡಿಎಂಕೆ ನಿರಾಕರಿಸಿದೆ ಹಾಗೂ ಭವಿಷ್ಯದಲ್ಲೂ ಮೈತ್ರಿ ಮಾಡಿಕೊಳ್ಳದಿರಲು ಬದ್ಧವಾಗಿದೆ. ಅದು ಸಿಎಎ, ಎನ್ಆರ್ಸಿಯನ್ನು ವಿರೋಧಿಸುವುದಾಗಿಯೂ ಭರವಸೆ ನೀಡಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷವು ಎಐಎಡಿಎಂಕೆಯನ್ನು ಬೆಂಬಲಿಸಲಿದೆ. ನಮ್ಮ ಮೈತ್ರಿಯು ವಿಧಾನಸಭಾ ಚುನಾವಣೆಗೂ ಮುಂದುವರಿಯಲಿದೆ” ಎಂದು ಉವೈಸಿ ಹೇಳಿದ್ದಾರೆ.
2021ರಲ್ಲಿ ನಡೆದಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಐಎಂಐಎಂ ಪಕ್ಷವು ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು ಹಾಗೂ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆಗ ಎಐಎಡಿಎಂಕೆಯು ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ಭಾಗವಾಗಿತ್ತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಎಂಎಂಕೆ ಪಕ್ಷವು ಬಿಜೆಪಿ ನೇತೃತ್ವದ ಮೈತ್ರಿಕೂಟದ ಭಾಗವಾಗಿದೆ. ತಮಿಳುನಾಡು ರಾಜ್ಯವು 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.