ವಕ್ಫ್ ಮಸೂದೆ, ಸಮಾನ ನಾಗರಿಕ ಸಂಹಿತೆಗೆ ವಿರೋಧ : ತಮಿಳುನಾಡು ಸಿಎಂ ಭೇಟಿಯಾದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
PC : muslimmirror.com
ಚೆನ್ನೈ : ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರಕಾರವು ಮಂಡಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ನಿಯೋಗವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿತು.
ಡಿಎಂಕೆ ಸಂಸದರ ವಿರೋಧದಿಂದಾಗಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಂಟಿ ಸದನ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿದೆ. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಂಟಿ ಸದನ ಸಮಿತಿಯಲ್ಲೂ ಬಲವಾಗಿ ವಿರೋಧಿಸಬೇಕು ಎಂದು ನಿಯೋಗವು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಮನವಿ ಮಾಡಿತು.
ಸದ್ಯ ಚರ್ಚೆಯಲ್ಲಿರುವ ಸಮಾನ ನಾಗರಿಕ ಸಂಹಿತೆಯ ಕುರಿತೂ ನಿಯೋಗವು ಬಲವಾದ ವಿರೋಧ ವ್ಯಕ್ತಪಡಿಸಿತು. ಫೆಬ್ರವರಿ 7, 2024ರಂದು ಉತ್ತರಾಖಂಡ ವಿಧಾನಸಭೆಯು ಅನುಮೋದಿಸಿರುವ ಹಾಗೂ ಮಾರ್ಚ್ 13, 2024ರಂದು ರಾಷ್ಟ್ರಪತಿಗಳು ಅಂಕಿತ ಹಾಕಿರುವ ಸಮಾನ ನಾಗರಿಕ ಸಂಹಿತೆಯು ಅಪಾಯಕಾರಿ ಸಂಗತಿಗಳನ್ನು ಒಳಗೊಂಡಿದೆ ಎಂಬುದರತ್ತ ನಿಯೋಗವು ಅವರ ಗಮನ ಸೆಳೆಯಿತು. ನಾಗರಿಕರ ಮೂಲಭೂತ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲು ಪ್ರಬಲ ಗುಂಪುಗಳು ಈ ಕಾಯ್ದೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ನಿಯೋಗವು ಆತಂಕ ವ್ಯಕ್ತಪಡಿಸಿತು.
ಸಮಾನ ನಾಗರಿಕ ಸಂಹಿತೆಯ ಕಾರ್ಯಸೂಚಿಯನ್ನು ಪದೇ ಪದೇ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರವನ್ನು ಖಂಡಿಸಿದ ನಿಯೋಗವು, ಈ ಶಾಸನವನ್ನು ನಿರಂಕುಶವಾಗಿ ರಚಿಸಿರುವ ಉತ್ತರಾಖಂಡ ಸರಕಾರವು, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ರೂಪಿಸಿದೆ ಎಂದು ಅಭಿಪ್ರಾಯಪಟ್ಟಿತು.
ನಿಯೋಗದ ಕಳವಳಗಳನ್ನು ಗಮನ ಕೊಟ್ಟು ಆಲಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಿ ನಾನು ಈಗಾಗಲೇ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾನೂನು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. ಮುಸ್ಲಿಂ ಸಮುದಾಯದ ಏಳಿಗೆಗೆ ನೆರವು ನೀಡುವುದನ್ನು ನಾನು ಮುಂದುವರಿಸಲಿದ್ದೇನೆ ಎಂದೂ ಅವರು ಭರವಸೆ ನೀಡಿದರು.
ನಿಯೋಗದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ರಹೀಂ ಮುಜಾದಿದಿ, ಶಾಸಕ ಹಾಗೂ ಮನಿತನೆಯ ಮಕ್ಕಳ್ ಕಚ್ಚಿ ಪಕ್ಷದ ಶಾಸಕ ಮತ್ತು ಅಧ್ಯಕ್ಷರಾದ ಪ್ರೊ. ಎಂ.ಎಚ್.ಜವಾಹಿರುಲ್ಲಾ, ತಮಿಳುನಾಡು ಜಮಾತುಲ್ ಉಲಾಮ ಸಭಾದ ಅಧ್ಯಕ್ಷ ಮೌಲಾನಾ ಪಿ.ಎ.ಖಾಜಾ ಮೊಹಿನುದ್ದೀನ್ ಬಾಖವಿ, ಪ್ರೊ. ಪಿ. ನಸ್ರುಲ್ಲಾ ಬಾಷಾ, ಎಚ್. ಅಬ್ದುರ್ ರಕೀಬ್, ಫಾತಿಮಾ ಮುಝಾಫ್ಫರ್ ಎಂ.ಸಿ ಇದ್ದರು.