ವ್ಹೀಲ್ ಚೇರ್ ನಿರಾಕರಿಸಿದ ಏರ್ ಇಂಡಿಯಾ ಸಿಬ್ಬಂದಿ: ಬಿದ್ದು ಆಸ್ಪತ್ರೆ ಸೇರಿದ 82ರ ವೃದ್ಧೆ!

PC: x.com/ndtv
ಹೊಸದಿಲ್ಲಿ: ಏರ್ ಇಂಡಿಯಾ ಸಿಬ್ಬಂದಿಯಿಂದ ವ್ಹೀಲ್ ಚೇರ್ ಸೌಲಭ್ಯ ನಿರಾಕರಿಸಲ್ಪಟ್ಟ 82 ವರ್ಷದ ವೃದ್ಧೆಯೊಬ್ಬರು ವಿಮಾನ ನಿಲ್ದಾಣದಲ್ಲಿ ಬಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಮಹಿಳೆ ಮೊದಲೇ ವ್ಹೀಲ್ ಚೇರ್ ಕಾಯ್ದಿರಿಸಿದ್ದರೂ ಸಿಬ್ಬಂದಿ ಈ ಸೌಲಭ್ಯ ಒದಗಿಸಲು ನಿರಾಕರಿಸಿದರು ಎನ್ನಲಾಗಿದ್ದು, ತೀವ್ರ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ವ್ಹೀಲ್ ಚೇರ್ ಗಾಗಿ ಒಂದು ಗಂಟೆ ಕಾದ ಲೆಫ್ಟಿನೆಂಟ್ ಜನರಲ್ ಅವರ ಪತ್ನಿ, ವಿಮಾನ ನಿಲ್ದಾಣದಲ್ಲಿ ಕುಟುಂಬ ಸದಸ್ಯರ ನೆರವಿನೊಂದಿಗೆ ನಡೆಯಲು ಆರಂಭಿಸಿದರು. ಕಾಲು ಜಾರಿ ಏರ್ ಲೈನ್ ಕೌಂಟರ್ ಬಳಿ ಬಿದ್ದರು ಎನ್ನಲಾಗಿದೆ.
ಬಿದ್ದು ಗಾಯಗೊಂಡ ವೃದ್ಧೆಗೆ ಪ್ರಥಮ ಚಿಕಿತ್ಸೆಯನ್ನೂ ನೀಡಿಲ್ಲ ಎಂದು ಮೊಮ್ಮಗಳು ಆಪಾದಿಸಿದ್ದಾರೆ. ಅಂತಿಮವಾಗಿ ವ್ಹೀಲ್ ಚೇರ್ ಕಳುಹಿಸಿಕೊಟ್ಟಿದ್ದು, ತುಟಿ, ತಲೆ ಮತ್ತು ಮೂಗಿನಲ್ಲಿ ರಕ್ತಸ್ರಾವ ಆಗುತ್ತಿರುವ ನಡುವೆಯೇ ವಿಮಾನವನ್ನು ಏರಿದರು ಎಂದು ಅವರು ವಿವರಿಸಿದ್ದಾರೆ. ಅಜ್ಜಿ ಎರಡು ದಿನಗಳಿಂದ ಆಸ್ಪತ್ರೆಯಲ್ಲಿದ್ದು, ಅವರ ದೇಹದ ಎಡಭಾಗ ಶಕ್ತಿ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಈ ಕುರಿತು ಮೊಮ್ಮಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, ಈ ಘಟನೆ ಗಮನಕ್ಕೆ ಬಂದಿದ್ದು, ಮಹಿಳೆಯ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇವೆ. ಈ ಬಗ್ಗೆ ಸಂಸ್ಥೆ ಕಾರ್ಯನಿವೃತ್ತವಾಗಿದ್ದು, ಶೀಘ್ರದಲ್ಲೇ ವಿವರಗಳನ್ನು ನೀಡಲಿದೆ ಎಂದು ಹೇಳಿದೆ.
ಶುಕ್ರವಾರ ರಾತ್ರಿ 2 ಗಂಟೆಗೆ ಕೊನೆಯದಾಗಿ ತಿದ್ದಿರುವ ಎಕ್ಸ್ ಪೋಸ್ಟ್ನಲ್ಲಿ ಪರೂಲ್ ಕನ್ವರ್ ಎಂಬ ಮಹಿಳೆ, "ನಾವು ದೆಹಲಿಯಿಂದ ಬೆಂಗಳೂರಿಗೆ ತೆರಳುವ ಏರ್ ಇಂಡಿಯಾ ವಿಮಾನಕ್ಕೆ (ಎಐ2600) ಮಂಗಳವಾರ ಟಿಕೆಟ್ ಕಾಯ್ದಿರಿಸಿದ್ದೆವು. ಪ್ರಯಾಣಿಕರಲ್ಲಿ 82 ವರ್ಷದ ಅಜ್ಜಿಯೂ ಸೇರಿದ್ದರು" ಎಂದು ವಿವರ ನೀಡಿದ್ದಾರೆ. ರಾಜ್ ಪರ್ಸೀಚಾ ಎಂದು ಅವರ ಹೆಸರು ಟಿಕೆಟ್ ನಲ್ಲಿ ನಮೂದಾಗಿದೆ. ವಿಮಾನದ ಬಾಗಿಲಿಗೆ ತೆರಳಲು ವ್ಹೀಲ್ ಚೇರ್ ಸೌಲಭ್ಯ ಒದಗಿಸುವಂತೆ ವಿಶೇಷ ಮನವಿ ಮಾಡಿಕೊಂಡಿರುವುದು ಟಿಕೆಟ್ ನಲ್ಲಿ ಕಾಣಿಸುತ್ತಿದೆ.