ದಿಲ್ಲಿ-ಇಂದೋರ್-ಮುಂಬೈ ಮಾರ್ಗದ ಏರ್ ಇಂಡಿಯಾ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ : ದೂರು ದಾಖಲು
PC: X/@airindia
ಇಂದೋರ್ : ಇಂದೋರ್ ಮೂಲಕ ದಿಲ್ಲಿಯಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಲಾಗಿದ್ದು, ಇದು ಹುಸಿ ಬೆದರಿಕೆ ಎಂಬುದು ನಂತರ ದೃಢಪಟ್ಟಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಮಧ್ಯಪ್ರದೇಶದ ಇಂದೋರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏರ್ ಇಂಡಿಯಾ ವಿಮಾನ ಸಂಖ್ಯೆ AI 636ನಲ್ಲಿ ಪೈಪ್ ಬಾಂಬ್ ಇಡಲಾಗಿದೆ ಎಂದು ಮಂಗಳವಾರ ಸಂಜೆ 5.08ರ ವೇಳೆಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬೆದರಿಕೆ ಹಾಕಲಾಗಿತ್ತು ಎಂದು ವಿಮಾನ ಯಾನ ಸಂಸ್ಥೆಯ ಸ್ಥಳೀಯ ಅಧಿಕಾರಿಯ ದೂರನ್ನು ಉಲ್ಲೇಖಿಸಿ ಏರೋಡ್ರಮ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಗೆ ಆಗಮಿಸುತ್ತಿದ್ದ ವಿಮಾನವು ಸಂಜೆ 4.38ರ ವೇಳೆಗಾಗಲೇ ಇಂದೋರ್ ನಿಂದ ಮುಂಬೈನತ್ತ ತೆರಳಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351 (4)ರ ಅಡಿ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆಯ ಸಂದೇಶ ಹಾಕಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಮಂಗಳವಾರ ವಿವಿಧ ಭಾರತೀಯ ವಿಮಾನ ಯಾನ ಸಂಸ್ಥೆಗಳ 100ಕ್ಕೂ ಹೆಚ್ಚು ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿವೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಕಳೆದ 16 ದಿನಗಳಲ್ಲಿ ಒಟ್ಟು 510ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಹುಸಿ ಬಾಂಬ್ ಬೆದರಿಕೆ ಸ್ವೀಕರಿಸಿವೆ. ಬಹುತೇಕ ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಒಡ್ಡಲಾಗಿದೆ.